SUDDILIVE || BANGLORE
ಸಾಲದ ಸುಳಿಗೆ ಕರ್ನಾಟಕ -ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ – ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಟೀಕೆ-Karnataka in debt trap - Budget that has put a lock on development - Criticism by Legislative Council member Dr. Dhananjaya Sarji
ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದು, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕರ್ನಾಟಕದ ಭವಿಷ್ಯವನ್ನು ಸಾಲದ ಸುಳಿಗೆ ತಳ್ಳಲಾಗಿದೆ, ಸಾಲ ಮಾಡಿಯಾದರು ತುಪ್ಪ ತಿನ್ನುವ ಸಂಸ್ಕೃತಿಯನ್ನು ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು.
ರಾಜ್ಯದ ಒಟ್ಟು ಸಾಲವು ₹8.14 ಲಕ್ಷ ಕೋಟಿಗೆ ಏರಿದ್ದು, ಸಾಲ-ಜಿಎಸ್‌ಡಿಪಿ ಅನುಪಾತವು ನಿಗಧಿತ 25% ಮಿತಿಯನ್ನು ಮೀರಿ 26.5% ತಲುಪಿದೆ. ಇದು ರಾಜ್ಯದ ಹಣಕಾಸು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಸರ್ಕಾರವು ಸಾಲದ ಮೇಲೆ ಸಾಲ ಮಾಡುತ್ತಿದ್ದು, 2024-25ರಿಂದ 2026-27ರ ಅವಧಿಗೆ ಅಂದಾಜು ₹3.5 ಲಕ್ಷ ಕೋಟಿಗೂ ಅಧಿಕ ಸಾಲ ಪಡೆಯುವ ಮೂಲಕ ರಾಜ್ಯವನ್ನು ದಿವಾಳಿಯತ್ತ ಒಯ್ಯುತ್ತಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲ ಪಡೆಯುವ ಅವಕಾಶವಿದ್ದರೂ, ಮಿತವ್ಯಯ ಮತ್ತು ಜವಾಬ್ದಾರಿಯುತ ಬಜೆಟ್ ಮಂಡಿಸುವ ಮೂಲಕ ಹಣಕಾಸು ಶಿಸ್ತು ಕಾಪಾಡಲಾಗಿತ್ತು, 2026–27ರ ಬಜೆಟ್‌ನಲ್ಲಿ ₹22,957 ಕೋಟಿ ಆದಾಯ ಕೊರತೆ ಇದೆ. ದಿನನಿತ್ಯದ ಖರ್ಚಿಗೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು
ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ₹51,034 ಕೋಟಿ ಮೀಸಲಿಡಲಾಗಿದ್ದು, ರಾಜ್ಯದ ಒಟ್ಟು ಕಂದಾಯ ಸ್ವೀಕೃತಿಯ 17% ಹಣ ಕೇವಲ ಈ ಯೋಜನೆಗಳಿಗೆ ವ್ಯಯವಾಗುತ್ತಿದೆ. ಇದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಕೊರತೆ ಎದುರಾಗಿದೆ. ₹4.09 ಲಕ್ಷ ಕೋಟಿಗಳ ಬೃಹತ್ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿ ಮೀಸಲಿಟ್ಟಿರುವುದು ಕೇವಲ ₹71,336 ಕೋಟಿ ಮಾತ್ರ. ಇದು ಸರ್ಕಾರದ ಅಭಿವೃದ್ಧಿ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.
ರಾಜ್ಯದ ಒಟ್ಟು ಆದಾಯದ ಸುಮಾರು 58% ಭಾಗ ಕೇವಲ ಬಡ್ಡಿ ಪಾವತಿ (₹45,600 ಕೋಟಿ) ಹಾಗೂ ಸಂಬಳ-ಪೆನ್ಷನ್ (₹1.36 ಲಕ್ಷ ಕೋಟಿ) ಪಾವತಿಗೆ ಬಳಕೆಯಾಗುತ್ತಿರುವುದು ಆತಂಕಕಾರಿ. ರಾಷ್ಟ್ರೀಯ ಆರೋಗ್ಯ ನೀತಿಯಡಿ ಆರೋಗ್ಯ ಕ್ಷೇತ್ರಕ್ಕೆ 8% ಅನುದಾನ ನೀಡಬೇಕಿದ್ದರೂ ಸರ್ಕಾರ ಕೇವಲ 5% ನೀಡಿದೆ. ಅದೇ ರೀತಿ ಶಿಕ್ಷಣದ ಹಂಚಿಕೆಯನ್ನು 12% ರಿಂದ 11% ಕ್ಕೆ ಇಳಿಸಲಾಗಿದೆ. 50,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಕೇವಲ 15,000 ಭರ್ತಿಗೆ ಮುಂದಾಗಿರುವುದು ಶಿಕ್ಷಣ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಲಿದೆ. "ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಾಗಿ ಚುನಾವಣಾ ತಂತ್ರಗಾರಿಕೆಯ ಭಾಗವಾಗಿದೆ. ರಾಜ್ಯದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳುವ ಈ ನಡೆ ದೀರ್ಘಕಾಲದಲ್ಲಿ ಕರ್ನಾಟಕದ ಜನತೆಗೆ ಮಾರಕವಾಗಲಿದೆ," ಎಂದು ಡಾ. ಧನಂಜಯ ಸರ್ಜಿ ಹೇಳಿದರು.
Karnataka in debt trap
