SUDDILIVE || SHIVAMOGGA
ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠಕ್ಕೆ ಒತ್ತಾಯ- Demand for a High Court bench for Shivamogga
ಶಿವಮೊಗ್ಗ ಜಿಲ್ಲಾ ವಕೀಲರ ಸಂಘವು ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಒತ್ತಾಯ ಮಾಡಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದ್ದು, ಎಲ್ಲಾ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಶೀಘ್ರವೇ ಈ ಬಗ್ಗೆ ತೀರ್ಮಾನಮಾಡಿ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಲಾಗುವುದು ಎಂದು ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚುತ್ತಿದೆ. ಪ್ರಕರಣಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ನ್ಯಾಯಾಲಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಈಗಾಗಲೇ ಈ ಬಗ್ಗೆ ಗಮನಹರಿಸಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಮತ್ತೆ ಯಾವುದಾದರೂ ಜಿಲ್ಲೆಯನ್ನು ಒಳಗೊಂಡಂತೆ ಹೈಕೋರ್ಟ್ ಸ್ಥಾಪನೆಯಾಗುವುದು ಅನಿವಾರ್‍ಯ ಮತ್ತು ಅಗತ್ಯವಾಗಿದೆ ಎಂದರು.
ಈಗ ಇರುವ ನ್ಯಾಯಾಲಯ ಸಂಕಿರ್ಣದಲ್ಲಿ ಸುಮಾರು ೧೮ ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತಿವೆ. ಹೊಸ ಕಟ್ಟಡದ ಬಗ್ಗೆಯೂ ಯೋಚಿಸಲಾಗುತ್ತಿದೆ. ಹೊಸ ಕಟ್ಟಡ ಕಟ್ಟಲು ಸುಮಾರು ೫ಎಕರೆ ಜಾಗ ಬೇಕಾಗುತ್ತದೆ. ಸಧ್ಯಕ್ಕೆ ಸವಳಂಗ ರಸ್ತೆಯಲ್ಲಿರುವ ಕೃಷಿ ಕಾಲೇಜಿನ ಎದುರಿನ ಜಾಗವನ್ನು ಪರಿಶೀಲನೆಗಾಗಿ ಸಂಘ ನೋಡಿದೆ ಎಂದರು.
ಶಿವಮೊಗ್ಗ ವಕೀಲರ ಸಂಘದಲ್ಲಿ ಹಲವು ಪ್ರತಿಷ್ಠಿತ ವ್ಯಕ್ತಿಗಳು ಕೆಲಸ ಮಾಡಿದ್ದಾರೆ. ಮೂರು ಜನ ಮುಖ್ಯಮಂತ್ರಿಗಳು ಕೂಡ ವಕೀಲರೇ ಆಗಿದ್ದರು. ನ್ಯಾಯವಾದಿಗಳಾಗಿ ಕೆಲಸ ಮಾಡಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸಿದ ಅನೇಕರು ನ್ಯಾಯಾಧೀಶರುಗಳಾಗಿ ನೇಮಕಗೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಿವಮೊಗ್ಗ ವಕೀಲರ ಸಂಘಕ್ಕೆ ತನ್ನದೇ ಆದ ಹೆಸರು ಇದೆ. ಈಗ ೧೨೫ ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಸಭಾ ಸದಸ್ಯರು, ಮಾಜಿ ಮಂತ್ರಿಗಳು, ಉಪ ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಜಿಲ್ಲಾ ವಾಣಿಜ್ಯ ಸಹಕಾರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಜೊತೆಗೆ ಸೇರಿಕೊಂಡು ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ ಹಿರಿಯ ವಕೀಲರಾದ ಬಸಪ್ಪಗೌಡರ ಅಧ್ಯಕ್ಷತೆಯಲ್ಲಿ ಹಿರಿಯ ವಕೀಲರುಗಳಾದ ಗೋಪಿಕೃಷ್ಣ, ಕುಷ್ಠಗಿ ವಾಸುದೇವಾಚಾರ್, ಎ.ಜಿ.ಭಟ್ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
Demand for a High Court bench for Shivamogga
