SUDDILIVE || SHIVAMOGGA
ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮುಂದುವರೆದ ಚಿನ್ನಾಭರಣ ಕಳವು-Jewellery theft continues at Shivamogga KSRTC bus stand
ನಗರದ KSRTC ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಈ ಬಾರಿ ಮಹಿಳೆಯ ವ್ಯಾನಿಟಿ ಬ್ಯಾಗ್ ನ ಒಳಗಿದ್ದ ಸಣ್ಣ ಪರ್ಸ್ ಕದಿಯುವ ಮೂಲಕ ಭಾರಿ ಮೊತ್ತದ ಚಿನ್ನಾಭರಣ ಕಳವು ಮಾಡಲಾಗಿದೆ.
ಏಪ್ರಿಲ್ 4ರಂದು ವಾಸಂತಿ ಎಂಬ ಮಹಿಳೆ ಮಗಳೊಂದಿಗೆ ಶಿವಮೊಗ್ಗದಿಂದ ಸಾಗರಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಾಗರಕ್ಕೆ ತೆರಳುವ ಬಸ್ ಹತ್ತುವ ವೇಳೆ ವಿಪರೀತ ಜನದಟ್ಟಣೆ ಇತ್ತು. ಈ ವೇಳೆ ಅವರ ಹೆಗಲಿನಲ್ಲಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿ ಸಣ್ಣ ಪರ್ಸ್ ಇಟ್ಟಿದ್ದರು. ಆ ಪರ್ಸ್ ನ್ನೇ ಖದೀಮರು ಕದ್ದುಕೊಂಡು ಹೋಗಿದ್ದಾರೆ.
ಬಸ್ ಹತ್ತುವ ಭರಾಟೆಯಲ್ಲಿದ್ದ ಮಹಿಳೆ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು 179 ಗ್ರಾಂ ಚಿನ್ನಾಭರಣ ಹಾಗೂ ₹35,000 ನಗದು ಸೇರಿ ಒಟ್ಟು ₹8,57,047 ಮೌಲ್ಯದ ವಸ್ತುಗಳು ಕಳುವಾಗಿದೆ. ಈ ಸಂಬಂಧ ಭದ್ರಾವತಿ ತಾಲೂಕು ಆನವೇರಿಯ ವಾಸಂತಿ ಎಂಬುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಸ್ ಹತ್ತಿದ ಬಳಿಕ ಕಂಡಕ್ಟರ್ ಬಳಿ ಟಿಕೆಟ್ ಪಡೆಯಲು ಹೋದಾಗ ಕಳ್ಳತನವಾಗಿರುವುದು ವಾಸಂತಿ ಅವರ ಗಮನಕ್ಕೆ ಬಂದಿದೆ. ಕೂಡಲೇ ಬಸ್‌ನಲ್ಲಿ ಹುಡುಕಾಡಿದರೂ ಪರ್ಸ್ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Jewellery theft continues at Shivamogga KSRTC bus stand
