SUDDILIVE || SHIVAMOGGA
ಸಚಿವರಿಂದ ಹುಲಿಕಲ್ ಘಾಟಿ ವೀಕ್ಷಣೆ, ಕೇವಲ ಭರವಸೆಯ ಗೂಡು- Minister's visit to Hulikal Ghati, just a glimmer of hope
ಹುಲಿಕಲ್ ಘಾಟಿ ದುರಂತ ನಡೆದು 18 ದಿನಗಳ ನಂತರ ಸಚಿವ ಮಧು ಬಂಗಾರಪ್ಪ ಇಂದು ಭೇಟಿ ನೀಡಿ ಪರಿಶೀಲಿಸಿ ಕೇವಲ ಆಕ್ಷೇಪಣೆ ಮಾಡಿದರೆ ಬಿಟ್ಟರೆ ಇದುವರೆಗೂ ಯಾವ ಕ್ರಮವೇ ಜರುಗದೆ ಇರುವುದು ಸ್ಪಷ್ಟಗೊಂಡಿದೆ.
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹೊಸನಗರ ತಾಲೂಕಿನ ವ್ಯಾಪ್ತಿಯ ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡದಿಂದ ಮೂವರ ಬಲಿಯಾಗಿತ್ತು. ಈ ಕುರಿತು ಸಮಗ್ರ ವಿವರ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಮಂಗಳವಾರ ಅವರು ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಕಾಮಗಾರಿ ಮತ್ತು ಮಣ್ಣು ಕುಸಿತದ ಪ್ರದೇಶವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಮೂವರು ಕಾರ್ಮಿಕರು ಮೃತಪಟ್ಟಿದ್ದು, ಸೂಕ್ತ ರೀತಿಯ ಮುನ್ನೆಚ್ಚರಿಕೆ ವಹಿಸದೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿ, ಗುತ್ತಿಗೆದಾರರ ವಿರುದ್ದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು. ಆದರೆ ಮೂವರ ಸಾವಾಗಿದ್ದರೂ ಎಫ್ ಐಆರ್ ದಾಖಲಾಗದೆ ಯುಡಿಆರ್ ಅಂದರೆ ಅಸಹಜ ಸಾವಾಗಿ ದೂರು ದಾಖಲಾಗಿರುವುದು ಪ್ರಕರಣದಲ್ಲಿ ಬಜಾವ್ ಯಾರನ್ನೋ ಬಜಾವ್ ಮಾಡುವ ಯತ್ನ ಎಂಬುದು ಸ್ಪಷ್ಟವಾಗಿದೆ.
ಹಾಗೂ ಲೋಕೋಪಯೋಗಿ ಸಚಿವರೊಂದಿಗೆ , ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುರ್ತಾಗಿ ವ್ಯವಸ್ಥಿತ ರೀತಿಯ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದ ಅವರು ಈ ಭಾಗದ ಜನಸಾಮಾನ್ಯರ ಅಹವಾಲುಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಮುಂದೆಯೂ ಮಾಡುತ್ತೇನೆಂದು ಭರವಸೆ ನೀಡಿದರು.
ಕಾಮಗಾರಿ ವಿವರ :
ಮಳೆಯಿಂದ ಭೂಕುಸಿತ ಉಂಟಾಗಿದ್ದ ಹುಲಿಕಲ್ ಘಾಟ್ ಸ್ಥಳದಲ್ಲಿ ಶಾಶ್ವತ ಪರಿಹಾರಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಮೊದಲ ಹಂತದಲ್ಲಿ ರೂ.435 ಲಕ್ಷಗಳ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 80 ಮೀಟರ್ ಉದ್ದದ ಆರ್.ಸಿ.ಸಿ. ತಡೆಗೋಡೆಯನ್ನು ಇಲಾಖೆಯ ತಾಂತ್ರಿಕ ವಿನ್ಯಾಸದಂತೆ ನಿರ್ಮಿಸಲಾಗುತ್ತಿದೆ.
ಡಿಸೆಂಬರ್ ಮಾಹೆಯಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 60 ಮೀಟರ್ ಉದ್ದದ ಭಾಗದಲ್ಲಿ ಹಳೆಯ ಮಣ್ಣನ್ನು ತೆರವುಗೊಳಿಸಿ, ಅಡಿಪಾಯದೊಂದಿಗೆ ಸುಮಾರು 6 ಮೀಟರ್ ಎತ್ತರದವರೆಗೆ ಗೋಡೆ ನಿರ್ಮಿಸಲಾಗಿದೆ.
ಹೊಸನಗರ ತಾಲೂಕಿನ ತೀರ್ಥಹಳ್ಳಿ - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 52ರ ಸರಪಳಿ 38.00 ಕಿ.ಮೀ ನಿಂದ 43.58 ಕಿ.ಮೀ ವರೆಗಿನ ಸುಮಾರು 5.58 ಕಿ.ಮೀ ಉದ್ದದ ರಸ್ತೆ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಬರಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಹೇರ್ ಪಿನ್ ತಿರುವುಗಳ ಸುಧಾರಣೆ:
ರಸ್ತೆಯ ಸರಪಳಿ 42.05 ಕಿ.ಮೀ ನಿಂದ 42.25 ಕಿ.ಮೀ ವರೆಗಿನ ಭಾಗವು ಪ್ರಸ್ತುತ ಅತ್ಯಂತ ಕಿರಿದಾದ ಹೇರ್ ಪಿನ್ ತಿರುವುಗಳಿಂದ ಕೂಡಿದ್ದು, ಈ ಭಾಗದ ಸುಧಾರಣೆಗೂ ಆದ್ಯತೆ ನೀಡಲಾಗಿದೆ ಎಂದರು.
ಇದೇ ವೇಳೆ ಸಾರ್ವಜನಿಕರು ಮಾತನಾಡಿ, ಹುಲಿಕಲ್ ಘಾಟ್ ರಸ್ತೆ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿ, ಅನುದಾನ ನಿಗದಿಗೊಳಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಈ ವೇಳೆ ಎಂಎಡಿಬಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರರಾದ ಗಣೇಶ್ , ಇತರೆ ಅಧಿಕಾರಿಗಳು , ಸ್ಥಳೀಯರು ಹಾಜರಿದ್ದರು.
Minister's visit to Hulikal Ghati, just a glimmer of hope





