SUDDILIVE || SHIVAMOGGA
ಮಾಂಗಲ್ಯ ಸರ ಕಳುವಿಗೆ ಯತ್ನಿಸಿದವರಿಗೆ ಧರ್ಮದೇಟು-ದೂರು ಪ್ರತಿದೂರು ದಾಖಲು- Complaint and counter-complaint filed against those who attempted to steal Mangalya Sara
ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ತಾಲೂಕು ಹಳೆ ಹೊಳೆಹಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಪ್ರಕರಣ ದೂರು ಮತ್ತು ಪ್ರತಿದೂರಿಗೆ ಸಾಕ್ಷಿಯಾಗಿದೆ
ಮಾಂಗಲ್ಯ ಸರ ಕಳುವಿಗೆ ಯತ್ನ
ಹಳೆ ಹೊಳೆಹಟ್ಟಿ ಗ್ರಾಮದ ನಿವಾಸಿ ಅಶ್ವಿನಿ ಎಂಬುವವರು ಮದುವೆ ಸಮಾರಂಭಕ್ಕೆ ಹೋಗಲು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಅಶ್ವಿನಿ ಅವರ ಕೊರಳಿನಲ್ಲಿದ್ದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ. ಸರ ಕಿತ್ತುಕೊಳ್ಳುವ ರಭಸಕ್ಕೆ ಮಹಿಳೆಯ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ ಕಳ್ಳರನ್ನು ಹಿಡಿಯಲು ಮುಂದಾದಾಗ ಚಾಕು ತೋರಿಸಿ ಬೆದರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಕಳ್ಳರು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಅಶ್ವಿನಿ ಅವರು ರಕ್ಷಣೆಗೆ ಕೂಗಿಕೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಕಳ್ಳರ ಬೈಕನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಕಳ್ಳರ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿಗಳು ಜಮೀನಿನೊಳಗೆ ಓಡಿ ಹೋಗಿದ್ದಾರೆ. ಸಾರ್ವಜನಿಕರು ಇಬ್ಬರನ್ನೂ ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ದಂಡಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಳ್ಳರ ದೂರು ದಾಖಲು
ಸಾರಕಳ್ಳತನ ಮಾಡಲು ಹೋಗಿ ಸಾರ್ವಜನಿಕರ ಬಳಿ ಧರ್ಮದೇಟು ತಿಂದ ಕಳ್ಳರೂ ಸಹ ದೂರು ದಾಖಲಿಸಿದ್ದಾರೆ. ಷಣ್ಮುಖ ಮತ್ತು ಸಂಘರ್ಷಕ್ಕೊಳಗಾದ ವ್ಯಕ್ತಿ ಪರಿಚಯವಾಗಿ ಇಬ್ಬರೂ ಶೋಕಿ ಮಾಡಿಕೊಂಡು ಮದ್ಯಸೇವಿಸಿ ಮಜಾವಾದ ಜೀವನ ನಡೆಸುತ್ತಿದ್ದ ವೇಳೆ ಹಣ ಖಾಲಿಯಾದ ಕಾರಣ ಮಹಿಳೆಯರ ಮಾಂಗಲ್ಯ ಸರ ಕದಿಯಲು ಮುಂದಾಗಿದ್ದಾರೆ.
ಮಾಂಗಲ್ಯಸರ ಕದ್ದು ಮದ್ಯಸೇವಿಸಲು ಮುಂದಾಗಿದ್ದ ಇಬ್ಬರನ್ನ ಹಳೇ ಹೊಳೆಹಟ್ಟಿ ಗ್ರಾಮಸ್ಥರು ಹಿಡಿದು ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಸಾರ್ವಜನಿಕರ ವಿರುದ್ಧವೂ ದೂರು ದಾಖಲಾಗಿದೆ. ಸದ್ಯಕ್ಕೆ ಇಬ್ಬರೂ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇಬ್ಬರ ವಿರುದ್ಧವೂ ಈ ಹಿಂದೆ ಹಲವು ಅಪರಾಧ ಪ್ರಕರಣ ದಾಖಲಾಗಿದೆ.
Complaint and counter-complaint filed against those who attempted to steal Mangalya Sara
