SUDDILIVE || SHIVAMOGGA
ಕರ್ತವ್ಯ ನಿರತ ಕೆಎಸ್ಆರ್‌ಪಿ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಅಕಾಲಿಕ ನಿಧನ- On-duty KSRP police constable dies of heart attack
ಇಲ್ಲಿನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್ (26) ಅವರು ಮಂಗಳವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾಗಿದ್ದು, ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 26ರಂದು ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
18 ದಿನಗಳ ಹಿಂದೆಯಷ್ಟೇ ನಡೆದಿತ್ತು ಮದುವೆ!
ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಮೃತ ಈರಣ್ಣ ಅವರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ. ಮದುವೆಯ ಸಂಭ್ರಮ ಮಾಸುವ ಮುನ್ನವೇ ಯುವ ಕಾನ್ಸ್‌ಟೇಬಲ್ ವಿಧಿವಶರಾಗಿರುವುದು ಹೆತ್ತವರು ಹಾಗೂ ನವವಧುವಿಗೆ ಆಘಾತ ತಂದಿದೆ. ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಅಧಿಕಾರಿಗಳಿಂದ ಸಂತಾಪ:
ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕೆಎಸ್ಆರ್‌ಪಿ 8ನೇ ಪಡೆಯ ಕಮಾಂಡೆಂಟ್ ಆದ ಎಸ್. ಯುವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಕರ್ತವ್ಯನಿಷ್ಠ ಯುವ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಇಲಾಖೆಗೆ ದೊಡ್ಡ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ" ಎಂದು ಕಮಾಂಡೆಂಟ್ ಕೋರಿದ್ದಾರೆ.

