SUDDILIVE || SHIVAMOGGA
ಸಕ್ರೆಬೈಲು ಆನೆ ಬಿಡಾರಕ್ಕೆ ಸಾರ್ವಜನಿಕರ ಪ್ರವೇಶ ತಾತ್ಕಾಲಿಕ ಬಂದ್- Public access to Sakrebailu elephant camp temporarily closed
ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಸಕ್ರೆಬೈಲು ಆನೆ ಬಿಡಾರಕ್ಕೆ ಸಾರ್ವಜನಿಕರ ಪ್ರವೇಶವನ್ನು ಮೇ 21 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮೇ 18 ರಂದು ದುಬಾರೆ ಸಾಕಾನೆ ಶಿಬಿರದಲ್ಲಿ 'ಕಂಜನ್' ಹಾಗೂ 'ಮಾರ್ತಾಂಡ' (ಮಖ್ನಾ) ಎಂಬ ಸಾಕಾನೆಗಳನ್ನು ಸ್ನಾನ ಮಾಡಿಸುತ್ತಿದ್ದ ಸಂದರ್ಭದಲ್ಲಿ, ಈ ಎರಡು ಆನೆಗಳ ನಡುವೆ ಕಾಳಗ (ಜಗಳ) ನಡೆದಿದೆ. ಈ ವೇಳೆ ನದಿಯ ಬಳಿ ನಿಂತು ಆನೆಗಳನ್ನು ವೀಕ್ಷಿಸುತ್ತಿದ್ದ ಮಹಿಳಾ ಪ್ರವಾಸಿಯೊಬ್ಬರು ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ ಅತ್ಯಂತ ಆಘಾತಕಾರಿ ಹಾಗೂ ದುಃಖಕರ ಘಟನೆ ಸಂಭವಿಸಿತ್ತು.
ಈ ದುರಂತದ ಹಿನ್ನೆಲೆಯಲ್ಲಿ, ಇಲಾಖಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೊಸದಾಗಿ ಪ್ರಮಾಣಿತ ಕಾರ್ಯ ವಿಧಾನವನ್ನು (SOP) ರೂಪಿಸುವ ಅಗತ್ಯವಿದೆ.
ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರ ನಿರ್ದೇಶನದ ಮೇರೆಗೆ, ಈ ಹೊಸ ಸುರಕ್ಷತಾ ನಿಯಮಾವಳಿಗಳು ಸಿದ್ಧವಾಗುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಕ್ರೆಬೈಲು ಆನೆ ಬಿಡಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅರಣ್ಯ ಇಲಾಖೆಯ ಮನವಿ: ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಈ ಪ್ರಕಟಣೆ ಹೊರಡಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೋರಿದ್ದಾರೆ.
Public access to Sakrebailu elephant camp temporarily closed

