SUDDILIVE || SHIVAMOGGA
ಶಿವನಿ ತಿರುವಿನಲ್ಲಿ ಕಾರು-ಬೈಕ್ ನಡುವೆ ಅಪಘಾತ-Accident between car and bike at Shivani cross
ಭದ್ರಾವತಿ: ನಗರದ ಶಿವನಿ ತಿರುವಿನ ಬಳಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಲಭ್ಯ ಮಾಹಿತಿ ಪ್ರಕಾರ, ಶಿವನಿ ತಿರುವಿನ ಬಳಿ ಟಾಟಾ ನೆಕ್ಸಾನ್ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪನ್ನೀರು ಸೆಲ್ವ (70) ಮತ್ತು ಕುಪಂ ರಾಣಿ (62) ಅವರಿಗೆ ಗಂಭೀರ ಗಾಯಗಳಾಗಿವೆ. ದಂಪತಿಗಳು ಶಿವನಿ ತಿರುವಿನ ಹತ್ತಿರವಿದ್ದ ಆಲೆಮನೆಯಿಂದ ಭದ್ರಾವತಿಗೆ ಬರುತ್ತಿರುವಾಗ ಹಿಂಬದಿಯಿಂದ ಬಂದ ನೆಕ್ಸಾನ್ ಕಾರು ಗುದ್ದಿದೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಪನ್ನೀರು ಸೆಲ್ವಂ ಅವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕುಪಂ ರಾಣಿ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ರಭಸ ಎಷ್ಟರ ಮಟ್ಟಿಗೆ ಇತ್ತೆಂದರೆ, ಡಿಕ್ಕಿಯ ಬಳಿಕ ಟಾಟಾ ನೆಕ್ಸಾನ್ ಕಾರು ರಸ್ತೆ ಬದಿಯ ಸಂದಿಗೆಯೊಳಗೆ ನುಗ್ಗಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದ್ವಿಚಕ್ರ ವಾಹನದ ಮುಂಭಾಗವೂ ಪುಡಿಪುಡಿಯಾಗಿದೆ. ಅಪಘಾತದ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಪಘಾತದಲ್ಲಿ ಭಾಗಿಯಾಗಿದ್ದ ಕಾರನ್ನು ಭದ್ರಾವತಿಯ ಪ್ರತಿಷ್ಠಿತ ವೈದ್ಯರೊಬ್ಬರು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಘಟನೆ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.
