ಎಸ್‌ಐಆರ್ ವಿರುದ್ಧ ಜನಜಾಗೃತಿ ಸಭೆ: ಮತದಾರರ ಹಕ್ಕುಗಳ ರಕ್ಷಣೆಗೆ ಜಾಗೃತಿಯಾಗುವಂತೆ ಕರೆ- Awareness Meeting Against SIR: Call for Vigilance to Protect Voters' Rights

SUDDILIVE || SH

ಎಸ್‌ಐಆರ್ ವಿರುದ್ಧ ಜನಜಾಗೃತಿ ಸಭೆ: ಮತದಾರರ ಹಕ್ಕುಗಳ ರಕ್ಷಣೆಗೆ ಜಾಗೃತಿಯಾಗುವಂತೆ ಕರೆ-  Awareness Meeting Against SIR: Call for Vigilance to Protect Voters' Rights 

Awareness, sir

ಶಿವಮೊಗ್ಗ: ನಗರದ ಪತ್ರಿಕಾ ಭವನದಲ್ಲಿ ವಕೀಲ ಶ್ರೀಪಾಲ್ ನೇತೃತ್ವದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಜನಜಾಗೃತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶ್ರೀಪಾಲ್, ಎಸ್‌ಐಆರ್ ಪ್ರಕ್ರಿಯೆ ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಇದರ ಪರಿಣಾಮಗಳ ಬಗ್ಗೆ ಜನರು ಜಾಗೃತರಾಗಬೇಕಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆದಾಗ ಅದರ ಗಂಭೀರತೆ ಅರ್ಥವಾಗಲಿಲ್ಲ. ಈಗ ರಾಜ್ಯದಾದ್ಯಂತ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಅವು ವಿವಿಧ ಜಿಲ್ಲೆಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು. ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿರುವ ತಂಡವು ಶಿವಮೊಗ್ಗಕ್ಕೆ ಆಗಮಿಸಿದ್ದು, ಬಳಿಕ ದಾವಣಗೆರೆಗೆ ತೆರಳಲಿದೆ ಎಂದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಚುನಾವಣಾ ಆಯೋಗವು ಕಠಿಣ ದಾಖಲೆ ಪರಿಶೀಲನೆ ನಡೆಸುತ್ತಿದೆ ಎಂದು ಆರೋಪಿಸಿದ ಅವರು, 2002ರಲ್ಲಿ ಮತದಾನ ಮಾಡಿದ್ದವರಿಗೂ ದಾಖಲೆಗಳನ್ನು ಕೇಳಲಾಗುತ್ತಿದೆ. ವಿವಿಧ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಸೇರಿದಂತೆ ಹಲವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಇರಲಿಲ್ಲ ಎಂಬ ಉದಾಹರಣೆ ನೀಡಿ, ಮತದಾನದ ಹಕ್ಕು ರಕ್ಷಿಸಿಕೊಳ್ಳಲು ಜನರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅಲ್ಪಸಂಖ್ಯಾತರು, ದಲಿತರು ಹಾಗೂ ಆದಿವಾಸಿಗಳನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಜನರಿಗೆ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ಉದ್ದೇಶದಿಂದ ರಾಜ್ಯದಾದ್ಯಂತ ಜಾಥಾ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ಆಯೋಜಿಸಲಾಗುವುದು ಎಂದು ತಿಳಿಸಿದರು.

Awareness Meeting Against SIR: Call for Vigilance to Protect Voters' Rights 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close