ಶಿವಮೊಗ್ಗದಲ್ಲಿ ವೈಮಾನಿಕ ದಾಳಿ ಅಣಕು ಪ್ರದರ್ಶನ: ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತದ ಸನ್ನದ್ಧತೆ-Air Raid Mock Drill Held in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ವೈಮಾನಿಕ ದಾಳಿ ಅಣಕು ಪ್ರದರ್ಶನ: ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತದ ಸನ್ನದ್ಧತೆ-Air Raid Mock Drill Held in SHIVAMOGGA

Air, mock

ಶಿವಮೊಗ್ಗ, ಜೂನ್ 5: ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ವೈಮಾನಿಕ ದಾಳಿ (ಏರ್ ರೈಡ್) ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆಗಳ ಕುರಿತ ಅಣಕು ಪ್ರದರ್ಶನ (ಮಾಕ್ ಡ್ರಿಲ್) ಯಶಸ್ವಿಯಾಗಿ ನಡೆಯಿತು.

ವೈಮಾನಿಕ ದಾಳಿ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ರಕ್ಷಿಸುವುದು, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವುದು ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಅಣಕು ಪ್ರದರ್ಶನ ಆಯೋಜಿಸಲಾಗಿತ್ತು.

ಅಣಕು ಪ್ರದರ್ಶನದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹರಕ್ಷಕ ದಳ, ಆರೋಗ್ಯ ಇಲಾಖೆ ಹಾಗೂ ವಿಶೇಷ ಕಾರ್ಯಪಡೆ (ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾದರಿಯ ರಕ್ಷಣಾ ತಂಡಗಳು) ಭಾಗವಹಿಸಿದ್ದವು.


2025ರ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಕೈಗೊಳ್ಳಲಾದ "ಆಪರೇಷನ್ ಸಿಂಧೂರ್" ಮಾದರಿಯನ್ನು ಆಧರಿಸಿ ಅಣಕು ಕಾರ್ಯಾಚರಣೆ ನಡೆಸಲಾಯಿತು. ಡ್ರೋನ್‌ಗಳ ಮೂಲಕ ವೈಮಾನಿಕ ದಾಳಿ ನಡೆದಿರುವಂತೆ ಚಿತ್ರಿಸಿ, ಮಾಲ್, ಶಾಲೆ ಹಾಗೂ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆದ ಸಂದರ್ಭವನ್ನು ಸೃಷ್ಟಿಸಿ ಸಾರ್ವಜನಿಕರ ರಕ್ಷಣಾ ಕಾರ್ಯಾಚರಣೆ ಪ್ರದರ್ಶಿಸಲಾಯಿತು.

ದಾಳಿಯ ಬಳಿಕ ಸಂಬಂಧಿಸಿದ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಬ್ಯಾರಿಕೇಡ್ ನಿರ್ಮಿಸುವುದು, ಸಂಚಾರ ನಿಯಂತ್ರಿಸುವುದು ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದನ್ನು ಪ್ರದರ್ಶಿಸಿದವು. ಬಾಂಬ್ ನಿಷ್ಕ್ರಿಯ ದಳದಿಂದ ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯೂ ನಡೆಯಿತು.

ಇದೇ ವೇಳೆ ಬಸ್ ಅಪಹರಣದಂತಹ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವ ವಿಧಾನವನ್ನು ಸಹ ಅಣಕು ರೂಪದಲ್ಲಿ ಪ್ರದರ್ಶಿಸಲಾಯಿತು. ಸ್ಥಳಾಂತರಗೊಂಡ ಸಾರ್ವಜನಿಕರಿಗೆ ತಾತ್ಕಾಲಿಕ ಆಶ್ರಯ ಕೇಂದ್ರವಾಗಿ ಸರ್ವೋದಯ ಶಾಲೆಯನ್ನು ಸಜ್ಜುಗೊಳಿಸಲಾಗಿತ್ತು.

ಅಣಕು ಪ್ರದರ್ಶನದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಇಂತಹ ಪರಿಸ್ಥಿತಿ ವಾಸ್ತವದಲ್ಲಿ ಎದುರಾಗದಿರುವುದೇ ಉತ್ತಮ. ಆದರೆ ಎದುರಾದರೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸಾರ್ವಜನಿಕರ ಜೀವ ರಕ್ಷಣೆ ಹೇಗೆ ಮಾಡಬಹುದು ಎಂಬುದನ್ನು ಈ ಅಣಕು ಪ್ರದರ್ಶನದ ಮೂಲಕ ಪರಿಣಾಮಕಾರಿಯಾಗಿ ತೋರಿಸಲಾಗಿದೆ" ಎಂದು ಹೇಳಿದರು.

Air Raid Mock Drill Held in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close