SUDDILIVE || SAGARA
ಐಗಿನಬೈಲು ತಿರುವಿನ ಬಳಿ ಅಂಬ್ಯುಲೆನ್ಸ್ ಪಲ್ಟಿ-Ambulance overturns near Aiginabailu turnoff
ಶಿವಮೊಗ್ಗ, ಜೂನ್ 5: ಶಿವಮೊಗ್ಗದಿಂದ ಸಾಗರದತ್ತ ತೆರಳುತ್ತಿದ್ದ ಖಾಲಿ ಅಂಬ್ಯುಲೆನ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಐಗಿನಬೈಲು ತಿರುವಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಅಂಬ್ಯುಲೆನ್ಸ್‌ನಲ್ಲಿ ಯಾವುದೇ ರೋಗಿ ಇಲ್ಲದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಮಾಹಿತಿಯ ಪ್ರಕಾರ, ಶಿವಮೊಗ್ಗದಿಂದ ಸಾಗರ ಕಡೆಗೆ ಅಂಬ್ಯುಲೆನ್ಸ್ ಖಾಲಿಯಾಗಿ ಸಂಚರಿಸುತ್ತಿತ್ತು. ಈ ವೇಳೆ ಐಗಿನಬೈಲು ತಿರುವಿನ ಬಳಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಬೊಲೆರೋ ಪಿಕಪ್ ವಾಹನವನ್ನು ತಪ್ಪಿಸಲು ಅಂಬ್ಯುಲೆನ್ಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ.
ಬ್ರೇಕ್ ಹಾಕಿದ ರಭಸಕ್ಕೆ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್‌ಗೆ ಹಾನಿಯಾಗಿದ್ದು, ಬೊಲೆರೋ ವಾಹನದ ಮುಂಭಾಗವೂ ನುಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಅಂಬ್ಯುಲೆನ್ಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲವು ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿರುವ ಐಗಿನಬೈಲು ತಿರುವಿನಲ್ಲಿ ಮತ್ತೊಮ್ಮೆ ಅನಾಹುತದ ಭೀತಿ ಎದುರಾದರೂ, ಈ ಬಾರಿ ಅದೃಷ್ಟ ಕೈಹಿಡಿದಿದೆ.
ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಈ ಪ್ರಕರಣ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
Ambulance overturns near Aiginabailu turnoff

