SUDDILIVE || SHIVAMOGGA
ಉಡಾನ್ ಯೋಜನೆಯಡಿಶಿವಮೊಗ್ಗ ಏರ್ ಪೋರ್ಟ್ ಪುನಶ್ಚೇತನಕ್ಕೆ ಪ್ರಯತ್ನ – ಸಂಸದ ಬಿ.ವೈ. ರಾಘವೇಂದ್ರ- Efforts to revive Shimoga Airport under Udan Yojana – MP B.Y. Raghavendra
ಶಿವಮೊಗ್ಗ, ಜೂನ್ 6: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಸಂಸ್ಥೆಗಳ ವಿಮಾನ ಹಾರಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಂಸದ ಪ್ರತಿಕ್ರಿಯೆ ನೀಡಿದ್ದು, ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಪುನರಾರಂಭಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೀದರ್ ಹಾಗೂ ಕಲಬುರಗಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸುಮಾರು ₹25 ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ನೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿತ್ತು. ಆದರೆ ಈ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯಡಿ ಸೇರಿಸುವಂತೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರವೂ ಈ ಕುರಿತು ಅರ್ಜಿ ಸಲ್ಲಿಸಿದ್ದು, ಅದನ್ನು ಅನುಸರಿಸಿ ವಿಮಾನ ಸೇವೆ ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಂಸದರು ತಿಳಿಸಿದರು.
ಡಿ.ಕೆ. ಶಿವಕುಮಾರ್ ಸರ್ಕಾರದ ಬಗ್ಗೆ ಪ್ರತಿಕ್ರಿಯೆ
ರಾಜ್ಯದ ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವರ ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ, ಹೊಸ ಮುಖ್ಯಮಂತ್ರಿ ಅವರ ಸರ್ಕಾರದ ಬಗ್ಗೆ ಆರಂಭದಲ್ಲಿ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಗಳು ಈಡೇರುವ ಬಗ್ಗೆ ಅನುಮಾನ ಮೂಡುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಿದರು.
"ನಿನ್ನೆ ಹಿರಿಯ ನಾಯಕರು ನೀಡಿದ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ. ಆದರೂ ಸರ್ಕಾರ ಜನರಲ್ಲಿ ವಿಶ್ವಾಸ ಮೂಡಿಸುವಂತಹ ಆಡಳಿತ ನೀಡಬಹುದು ಎಂಬ ಆಶಾಭಾವನೆ ನಮ್ಮಲ್ಲಿದೆ. ಈಗಷ್ಟೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಂತದಲ್ಲೇ ಟೀಕೆ ಮಾಡಲು ಇಷ್ಟಪಡುವುದಿಲ್ಲ. ಕಾದು ನೋಡೋಣ. ಆದರೆ ಸರ್ಕಾರದ ಮೇಲೆ ಎಲ್ಲೋ ಒಂದು ಕಡೆ ವಿಶ್ವಾಸದ ಕೊರತೆ ಕಾಣಿಸುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟರು.
