SUDDILIVE || SHIVAMOGGA
ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ- ಅಳಿಯನ ವಿರುದ್ಧ ಅತ್ತೆ ದೂರು-Attempt to set house on fire by pouring petrol
ಶಿವಮೊಗ್ಗ, ಜೂನ್ 9: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಅಳಿಯನೊಬ್ಬ ಅತ್ತೆಯ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಜನೂರಿನ ವಿನಾಯಕ ಬೀದಿಯ ನಿವಾಸಿ ದಾನಮ್ಮ ಅವರು ನೀಡಿದ ದೂರಿನ ಮೇರೆಗೆ ಮಂಜುನಾಥ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ದಾನಮ್ಮ ಅವರ ಪುತ್ರಿ ಸುಚಿತ್ರಾ ಸುಮಾರು 13 ವರ್ಷಗಳ ಹಿಂದೆ ಮಂಜುನಾಥ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಮದ್ಯದ ಚಟ ಹಾಗೂ ಕುಟುಂಬದ ಕಲಹಗಳಿಂದಾಗಿ ಕಳೆದ 6-7 ವರ್ಷಗಳಿಂದ ಸುಚಿತ್ರಾ ತಾಯಿಯ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 7ರಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಮಂಜುನಾಥ್ ದಾನಮ್ಮ ಅವರ ಮನೆಗೆ ಬಂದು ಬಾಗಿಲು ಮುಚ್ಚಿಕೊಂಡಿದ್ದ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜೀವಂತವಾಗಿ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಪೆಟ್ರೋಲ್ ತಂದು ಮನೆ, ಬಾಗಿಲು, ಕಿಟಕಿ ಹಾಗೂ ಬಟ್ಟೆಗಳಿಗೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮನೆಯೊಳಗಿದ್ದ ದಾನಮ್ಮ ಅವರು ಅಪಾಯವನ್ನು ಅರಿತು ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Attempt to set house on fire by pouring petrol

