SUDDILIVE || SHIVAMOGGA
ಲಕ್ಷಾನುಗಟ್ಟಲೆ ಮೌಲ್ಯದ ದಾಖಲೆಗಳನ್ನ ಹಿಂದಿರುಗಿಸಿದ ಬಿಜೆಪಿ ಕಾರ್ಯಕರ್ತ- BJP worker returns documents worth lakhs
ಶಿವಮೊಗ್ಗ, ಜೂನ್ 19: ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮುಂಭಾಗದಲ್ಲಿ ತೆರಳುತ್ತಿದ್ದ ಸ್ಕೂಟಿಯ ಸವಾರರೊಬ್ಬರ ಪರ್ಸ್ ರಸ್ತೆಗೆ ಬಿದ್ದಿರುವುದನ್ನು ಬಿ.ಆರ್. ಸಂತೋಷ್ ನಾಯಕ್ ಗಮನಿಸಿದರು. ಪರ್ಸ್‌ನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಪ್ರಮುಖ ದಾಖಲೆಗಳು ಹಾಗೂ ಅಗತ್ಯ ದಾಖಲೆಗಳು ಇದ್ದವು ಎಂದು ತಿಳಿದುಬಂದಿತು.
ತಕ್ಷಣ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಂಡ ಸಂತೋಷ್ ನಾಯಕ್ ಅವರು ಪರ್ಸ್‌ನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ನೇರವಾಗಿ ವಿನೋಬನಗರ ಪೊಲೀಸ್ ಠಾಣೆಗೆ ತೆರಳಿ ಠಾಣೆಯ ಸಿಪಿಐ ಅವರಿಗೆ ಖುದ್ದಾಗಿ ಹಸ್ತಾಂತರಿಸಿದರು.
ಬಿ.ಆರ್. ಸಂತೋಷ್ ನಾಯಕ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿದ್ದು, ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ.
ಸಾರ್ವಜನಿಕರ ಕಳೆದುಹೋದ ವಸ್ತುಗಳನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ತಲುಪಿಸುವ ಉದ್ದೇಶದಿಂದ ಅವರು ತೋರಿದ ಪ್ರಾಮಾಣಿಕತೆ ಮತ್ತು ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
BJP worker returns documents worth lakhs
