ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ, ನ್ಯಾಯಾಧೀಶರು ಹೇಳಿದ್ದೇನು? Bomb threat to court, what did the judge say?

SUDDILIVE || SHIVAMOGGA

ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ, ನ್ಯಾಯಾಧೀಶರು ಹೇಳಿದ್ದೇನು? Bomb threat to court, what did the judge say?   

Bomb, judge


ಶಿವಮೊಗ್ಗ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಸಮಗ್ರ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎ. ಮಂಜುನಾಥ್, ಕಳೆದ ಎರಡು ತಿಂಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

"ರಾಜ್ಯದ ಹಲವು ಜಿಲ್ಲಾ ನ್ಯಾಯಾಧೀಶರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮೊಬೈಲ್ ಸಂಖ್ಯೆಗಳ ಮೂಲಕ ವಕೀಲರು, ನ್ಯಾಯಾಲಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಣದ ಸಹಾಯ ಕೇಳುವ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಬ್ಯಾಂಕ್ ಸಮಸ್ಯೆ ಇದೆ ಎಂದು ಹೇಳಿ ₹50 ಸಾವಿರ ಹಣ ಕಳುಹಿಸುವಂತೆ ಮನವಿ ಮಾಡಲಾಗುತ್ತಿದೆ. ಈ ರೀತಿಯ ಪ್ರಕರಣಗಳು ಮೊದಲು ಚಿಕ್ಕಬಳ್ಳಾಪುರದಲ್ಲಿ ಆರಂಭವಾಗಿ, ಬಳಿಕ ಹಾಸನ, ಗದಗ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರದಿಯಾಗಿವೆ" ಎಂದು ತಿಳಿಸಿದರು.

ಶಿವಮೊಗ್ಗ ನ್ಯಾಯಾಲಯಕ್ಕೆ ಬಂದಿರುವ ಇ-ಮೇಲ್‌ನಲ್ಲಿಯೂ ಇದೇ ಮಾದರಿಯ ವಿಷಯಗಳಿದ್ದು, ಕೋಲಾರ ಮತ್ತು ಧಾರವಾಡ ಜಿಲ್ಲೆಗಳಿಗೆ ಕಳುಹಿಸಲಾದ ಬೆದರಿಕೆ ಪತ್ರದ ಪ್ರತಿಯಂತೆಯೇ ಇದೆ ಎಂದು ಅವರು ಹೇಳಿದರು.

ಇ-ಮೇಲ್‌ನಲ್ಲಿ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದಲ್ಲಿ ಐದು ಮಿನಿ ಗ್ಯಾಸ್ ಸಿಲಿಂಡರ್ ಬಾಂಬ್‌ಗಳು ಸ್ಫೋಟಗೊಳ್ಳಲಿವೆ ಎಂದು ಉಲ್ಲೇಖಿಸಲಾಗಿತ್ತು. ಜೊತೆಗೆ ಕೆಲವು ರಾಜಕೀಯ ಹಾಗೂ ಹಳೆಯ ಪೊಲೀಸ್ ಪ್ರಕರಣಗಳ ಉಲ್ಲೇಖಗಳನ್ನೂ ಮಾಡಲಾಗಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ದೂರು ನೀಡಲಾಗಿದ್ದು, ಸೈಬರ್ ಕ್ರೈಂ ಅಧಿಕಾರಿಗಳು ಇ-ಮೇಲ್ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನ್ಯಾಯಾಧೀಶ ಮಂಜುನಾಥ್ ತಿಳಿಸಿದರು.

"ಪ್ರಾಥಮಿಕವಾಗಿ ಇದು ನಕಲಿ ಬೆದರಿಕೆ ಎನ್ನುವ ಅನುಮಾನವಿದೆ. ಆದರೂ ಸಿಬ್ಬಂದಿ, ವಕೀಲರು ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದರು.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆದಿದ್ದು, ಭದ್ರತಾ ಪರಿಶೀಲನೆ ಬಳಿಕ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Bomb threat to court, what did the judge say? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close