ಏನಿದು ಶಾಸಕ ಆರಗರವರ ಸುಪಾರಿ ಪೇ ಚರ್ಚಾ?What is MLA Aaragar's supari pay discussion?

SUDDILIVE || SHIVAMOGGA

ಏನಿದು ಶಾಸಕ ಆರಗರವರ ಸುಪಾರಿ ಪೇ ಚರ್ಚಾ?What is MLA Aaragar's supari pay discussion?      

Mla, supari

ಶಿವಮೊಗ್ಗ, ಜೂನ್ 24: ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು ತಡೆದು ನಿಲ್ಲಿಸಿರುವ ಬೆಳವಣಿಗೆಯಿಂದ ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿದ ಹಿನ್ನೆಲೆಯಲ್ಲಿ, ಅಡಿಕೆ ಬೆಳೆಗಾರ ಸಹಕಾರ ಸಂಘಗಳ ಮಹಾಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಬೆಳೆಗಾರರು ಯಾವುದೇ ಕಾರಣಕ್ಕೂ ಗಾಬರಿಯಾಗಬಾರದು ಎಂದು ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸುಮಾರು 30 ಅಡಿಕೆ ಲಾರಿಗಳನ್ನು ಅಧಿಕಾರಿಗಳು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜೂನ್ 9 ಮತ್ತು 10ರಂದು ಅಡಿಕೆ ಮಹಾಮಂಡಳಿ ಅಧ್ಯಕ್ಷ ತುಮಕೋಸ್ ಹಾಗೂ ಕ್ಯಾಂಪ್ಕೊ ಅಧ್ಯಕ್ಷರೊಂದಿಗೆ ದೆಹಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪ್ರಸ್ತುತ ತಡೆಹಿಡಿಯಲಾದ ಅಡಿಕೆ ಲಾರಿಗಳು ಮತ್ತು ಸರಕುಗಳು ಅಧಿಕಾರಿಗಳ ವಶದಲ್ಲಿವೆ. ಮಹಾರಾಷ್ಟ್ರದ ರಸ್ತೆಗಳನ್ನು ಬಳಸಿಕೊಂಡು ಸಾಗಣೆ ನಡೆಯುತ್ತಿದ್ದರೂ, ಸರಕುಗಳನ್ನು ಎಲ್ಲಿಯೂ ಅನ್‌ಲೋಡ್ ಮಾಡಲಾಗುತ್ತಿಲ್ಲ. ಮಧ್ಯದ ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸಿ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ತೊಂದರೆ ನೀಡಬಾರದು ಎಂಬುದು ನಮ್ಮ ಮನವಿಯಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

“ಯಾವುದೇ ದಾಖಲೆಗಳ ಕೊರತೆ ಇದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಿ. ಆದರೆ ರಸ್ತೆ ಮಧ್ಯದಲ್ಲಿ ಲಾರಿಗಳನ್ನು ತಡೆದು ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ. ಸರಕು ಎಲ್ಲಿ ಅನ್‌ಲೋಡ್ ಆಗುತ್ತದೆಯೋ ಅಲ್ಲಿ ಪರಿಶೀಲನೆ ನಡೆಸಬಹುದು. ಅದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಈ ಕುರಿತು ಸಂಸದರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಗಮನಹರಿಸಿದ್ದು, ಅಡಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಅಡಿಕೆ ಬೆಲೆ ಕುಸಿತದ ಆತಂಕ

ಮಹಾರಾಷ್ಟ್ರದ ಬೆಳವಣಿಗೆಯಿಂದಾಗಿ ಅಡಿಕೆ ಲೋಡ್ ಮಾಡುವ ಕಾರ್ಯ ಕುಂಠಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತದ ವಾತಾವರಣ ನಿರ್ಮಾಣವಾಗಿದೆ. ಆದರೆ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು ಎಂದು ಆರಗ ಜ್ಞಾನೇಂದ್ರ ಮನವಿ ಮಾಡಿದರು.

“ಅಡಿಕೆ ಬೆಳೆಗಾರರ ಸಂಘಗಳು ಬಲವಾಗಿವೆ. ಸಮಸ್ಯೆ ಎದುರಾದಾಗ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಗಾಬರಿಯಾಗಿ ಕಡಿಮೆ ಬೆಲೆಗೆ ಅಡಿಕೆಯನ್ನು ಮಾರಾಟ ಮಾಡಬೇಡಿ. ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಡಿಕೆ ಗುಣಮಟ್ಟದ ಅನುಮಾನ

ಅಡಿಕೆ ಗುಣಮಟ್ಟದ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರಾದ ಅವರನ್ನು ಸಂಘದ ಪ್ರತಿನಿಧಿಗಳು ಭೇಟಿ ಮಾಡಿ ಉತ್ಪಾದನಾ ವೆಚ್ಚವನ್ನು ಪ್ರತಿ ಕಿಲೋಗ್ರಾಂಗೆ 351 ರೂಪಾಯಿಯಿಂದ 451 ರೂಪಾಯಿಗೆ ಹೆಚ್ಚಿಸುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಬೇಡಿಕೆ ಈಡೇರಿದರೆ ವಿದೇಶಗಳಿಂದ ಆಮದು ಆಗುವ ಅಡಿಕೆಗೆ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ಸಿಗುತ್ತದೆ. ಪರಿಣಾಮವಾಗಿ ವಿದೇಶಿ ಅಡಿಕೆಯ ಅನಿಯಂತ್ರಿತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಮಂಡಿ ತೆರಿಗೆ ವಿರೋಧ

ಅಡಿಕೆ ವ್ಯಾಪಾರಕ್ಕೆ ಮತ್ತೊಂದು ಸಮಸ್ಯೆಯಾಗಿ ಉತ್ತರ ಪ್ರದೇಶದಲ್ಲಿ ಮಂಡಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತೆರಿಗೆ ವಿಧಿಸದಂತೆ ಮನವಿ ಮಾಡಲಾಗಿದೆ.

ಜಿಎಸ್‌ಟಿ ವ್ಯವಸ್ಥೆ ಜಾರಿಯಲ್ಲಿರುವಾಗ ಪ್ರತ್ಯೇಕ ಮಂಡಿ ತೆರಿಗೆ ವಿಧಿಸುವುದು ವ್ಯಾಪಾರಿಗಳಿಗೆ ಹೆಚ್ಚುವರಿ ಹೊರೆ ಉಂಟುಮಾಡುತ್ತದೆ. ಈ ವಿಷಯವನ್ನು ಸಂಬಂಧಿಸಿದ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಕೃತಕ ಬಣ್ಣ ಬಳಕೆ ಬಗ್ಗೆ ಎಚ್ಚರಿಕೆ

ಅಡಿಕೆ ಕ್ಷೇತ್ರದಲ್ಲಿ ಇತ್ತೀಚೆಗೆ ಕೃತಕ ಬಣ್ಣ ಬಳಕೆಯ ಪ್ರವೃತ್ತಿ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

ಹಿಂದೆ ಅಡಿಕೆಗೆ ನೈಸರ್ಗಿಕವಾಗಿ ಬಣ್ಣ ಬರಲು ‘ಚೊಗರು’ ವಿಧಾನವನ್ನು ಬಳಸಲಾಗುತ್ತಿತ್ತು. ಆದರೆ ಈಗ ಕೆಲವರು ರಾಸಾಯನಿಕ ಆಧಾರಿತ ಕೃತಕ ಬಣ್ಣಗಳನ್ನು ಬಳಸುತ್ತಿರುವುದು ಅಡಿಕೆಯ ಗುಣಮಟ್ಟವನ್ನು ಹಾಳು ಮಾಡುತ್ತಿದೆ ಎಂದು ಹೇಳಿದರು.

“ಕೃತಕ ಬಣ್ಣ ಬಳಸುವ ಮೂಲಕ ಅಡಿಕೆ ಬೆಳೆಗಾರರ ಬದುಕನ್ನೇ ಹಾಳು ಮಾಡುವ ಕೆಲಸ ನಡೆಯುತ್ತಿದೆ. ವ್ಯಾಪಾರಿಗಳು ಮತ್ತು ರೈತರು ಹಣ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕೆ ವಿಷಕಾರಿ ಬಣ್ಣಗಳನ್ನು ಬಳಸಬಾರದು. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ,” ಎಂದು ಎಚ್ಚರಿಸಿದರು.

ಅಡಿಕೆಗೆ ಬಣ್ಣ ಬೆರೆಸುವ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲೇ ಇಂತಹ ಚಟುವಟಿಕೆಗಳು ಮುಂದುವರಿದರೆ, ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಬಹುದು. ಅಂತಿಮವಾಗಿ ಅಡಿಕೆ ಬಳಕೆಯ ಮೇಲೆಯೇ ನಿರ್ಬಂಧ ಹೇರಲು ಕಾರಣವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ ಎಂದು ಅವರು ಹೇಳಿದರು.

ಅಡಿಕೆ ಬೆಳೆಗಾರರ ಆತ್ಮಹತ್ಯೆ ಪ್ರಕರಣಗಳಿಲ್ಲ

ಅಡಿಕೆಗೆ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

“ಬೆಳೆಗಾರರಿಗೆ ಉತ್ತಮ ಆದಾಯ ಸಿಗುತ್ತಿರುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈ ಸ್ಥಿತಿಯನ್ನು ಹಾಳು ಮಾಡುವ ಯಾವುದೇ ಕ್ರಮಗಳನ್ನು ನಾವು ಸಹಿಸುವುದಿಲ್ಲ,” ಎಂದು ಹೇಳಿದರು.

ಕಾನೂನು ತರಲು ಆಗ್ರಹ

ಅಡಿಕೆಗೆ ಕೃತಕ ಬಣ್ಣ ಬೆರೆಸುವ ಪ್ರಕರಣಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ ವಿದೇಶಿ ಕಳಪೆ ಗುಣಮಟ್ಟದ ಅಡಿಕೆಯ ಅತಿಕ್ರಮಣವೂ ರಾಜ್ಯದ ಅಡಿಕೆ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.

‘ಚಾಯ್ ಪೇ ಚರ್ಚಾ’ ಮೂಲಕ ಜಾಗೃತಿ

ಅಡಿಕೆ ಚೇಣಿ ಮಾಡುವವರೊಂದಿಗೆ ಶುಕ್ರವಾರ ವಿಶೇಷ ‘ಚಹ ಕೂಟ’ವನ್ನ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಅಲ್ಲಿ ಕೃತಕ ಬಣ್ಣ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಇದಲ್ಲದೆ, ಬಿಲ್ ಇಲ್ಲದ ವ್ಯವಹಾರಗಳು ಮತ್ತು ‘ಕಟ್ ಬಿಲ್’ ಸಮಸ್ಯೆಗಳು ಅಡಿಕೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚುತ್ತಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಗುಣಮಟ್ಟ ಕಾಪಾಡಿದರೆ ಮಾತ್ರ ಅಡಿಕೆ ಉದ್ಯಮದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

What is MLA Aaragar's supari pay discussion?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close