ಸಚಿವ ಸಂಪುಟ ವಿಸ್ತರಣೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮತ್ತು ಸಿಎ ಸೈಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಡಿ.ಎಸ್. ಅರುಣ್ ವಾಗ್ದಾಳಿ-Cabinet expansion, Education Department negligence and corruption in CA site allocation: DS Arun lashes out at state government

SUDDILIVE || SHIVAMOGGA

ಸಚಿವ ಸಂಪುಟ ವಿಸ್ತರಣೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮತ್ತು ಸಿಎ ಸೈಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಡಿ.ಎಸ್. ಅರುಣ್ ವಾಗ್ದಾಳಿ-Cabinet expansion, Education Department negligence and corruption in CA site allocation: DS Arun lashes out at state government

Cabinet, arun


ಶಿವಮೊಗ್ಗ: ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡು 15 ದಿನಗಳು ಕಳೆದರೂ ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಗೊಂದಲದಲ್ಲೇ ಮುಳುಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲೇ ಸಚಿವರ ಖಾತೆ ಹಂಚಿಕೆಯಲ್ಲಿ ಗೊಂದಲ ಉಂಟಾಗಿದ್ದು, ಆರ್‌ಡಿಪಿಆರ್ ಸೇರಿದಂತೆ ಹಲವು ಖಾತೆಗಳ ಹಂಚಿಕೆಯಲ್ಲಿ ಸರ್ಕಾರ ಸ್ಪಷ್ಟತೆ ತೋರಿಲ್ಲ ಎಂದು ಟೀಕಿಸಿದರು.

ಶಿಕ್ಷಣ ಇಲಾಖೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಆಸಕ್ತಿಯ ಕೊರತೆ ಕಂಡುಬರುತ್ತಿದೆ. ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನಗಳಿಗೆ ಯಾವುದೇ ಪೈಪೋಟಿ ಕಾಣಿಸದಿರುವುದು ಶಿಕ್ಷಣ ಕ್ಷೇತ್ರದ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಕೆಪಿಎಸ್ ಯೋಜನೆ ಉದ್ಘಾಟನೆಗೆ ಸಂಬಂಧಿಸಿದಂತೆ ಸರ್ಕಾರ ರಾಜಕೀಯ ಮಾಡಿದೆ ಎಂದು ಆರೋಪಿಸಿದ ಅವರು, ಯೋಜನೆಯನ್ನು ಶಿವಮೊಗ್ಗದಿಂದಲೇ ಆರಂಭಿಸಬೇಕೆಂಬ ಉದ್ದೇಶ ತೋರಿದರೂ ಬಳಿಕ ಕಾರ್ಯಕ್ರಮವನ್ನು ಕೈಬಿಟ್ಟಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಕುವೆಂಪು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಅಂಕಪಟ್ಟಿ ವಿತರಿಸುವ ವ್ಯವಸ್ಥೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದ ಅವರು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗಿಂತ ಬೇರೆ ವಿಚಾರಗಳ ಮೇಲೆ ಸರ್ಕಾರದ ಗಮನ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಹೇಳಿದರು.

ಮೂರು ವರ್ಷಗಳಿಂದ 50 ಸಾವಿರ ಶಿಕ್ಷಕರ ನೇಮಕಾತಿ ಮಾಡುವುದಾಗಿ ಹೇಳಿಕೊಂಡು ಬಂದ ಸರ್ಕಾರ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ. ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭವಾಗುತ್ತಿದ್ದರೂ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳದಿರುವುದು ಆತಂಕಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎ (ಸಿವಿಕ್ ಅಮೆನಿಟಿ) ಸೈಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದ ಡಿ.ಎಸ್. ಅರುಣ್, ಸಾರ್ವಜನಿಕ ಸಂಸ್ಥೆಗಳಿಗೆ ನೀಡಬೇಕಾದ ಸಿಎ ಸೈಟ್‌ಗಳನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಹೇಳಿದರು.

ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿಎ ಸೈಟ್‌ಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಪಡೆಯಲು ಪ್ರಯತ್ನ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿಯೂ ಇದೇ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಈ ವಿಷಯವನ್ನು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಿದಾಗ ಆಗಿನ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಬಿಜೆಪಿಗೂ ಸಿಎ ಸೈಟ್ ನೀಡಲಾಗಿದೆ ಎಂದು ಹೇಳಿದ್ದರು. ಆದರೆ ಅಂತಹ ಯಾವುದೇ ಉದಾಹರಣೆಯನ್ನು ತೋರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೂ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಈಗಾಗಲೇ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದರೂ ಮತ್ತೆ ದಾಖಲಾತಿಗಳ ಪರಿಷ್ಕರಣೆಗೆ ಮುಂದಾಗಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಒಟ್ಟಾರೆ ರಾಜ್ಯ ಸರ್ಕಾರ ಅಭಿವೃದ್ಧಿಗಿಂತ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಗೊಂದಲಗಳಲ್ಲಿ ತೊಡಗಿಕೊಂಡಿದೆ ಎಂದು ಡಿ.ಎಸ್. ಅರುಣ್ ಆರೋಪಿಸಿದರು.

Cabinet expansion, Education Department negligence and corruption in CA site allocation: DS Arun lashes out at state government

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close