ಖಾತೆ ಹಂಚಿಕೆ ಗೊಂದಲ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ-ಸಿಟಿ ರವಿ-Confusion over portfolio allocation will affect the government's administration – C.T. Ravi

SUDDILIVE || SHIVAMOGGA

ಖಾತೆ ಹಂಚಿಕೆ ಗೊಂದಲ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ-ಸಿಟಿ ರವಿ-Confusion over portfolio allocation will affect the government's administration – C.T. Ravi.

Confusion, portfolio

ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರವಾಗಿ ಉಂಟಾಗಿರುವ ಅಸಮಾಧಾನ ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಎಂಎಲ್‌ಸಿ ಸಿ.ಟಿ. ರವಿ ಅಭಿಪ್ರಾಯಪಟ್ಟರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆಗಳಿಗಾಗಿ ನಡೆಯುತ್ತಿರುವ ಚರ್ಚೆ ಮತ್ತು ಅಸಮಾಧಾನ ಸರ್ಕಾರದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

"ಕೆಲವು ಹಿರಿಯ ಸಚಿವರಿಗೆ ನೀಡಲಾದ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇನ್ನೂ ಸರ್ಕಾರ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಇದರಿಂದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ" ಎಂದು ಹೇಳಿದರು.

ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ ಸಿ.ಟಿ. ರವಿ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ವೇಳೆ ರಾಜ್ಯಕ್ಕೆ 1.34 ಲಕ್ಷ ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಈಗ ಮತ್ತಷ್ಟು ಯೋಜನೆಗಳು ಮತ್ತು ಘೋಷಣೆಗಳನ್ನು ಮಾಡುತ್ತಿದ್ದಾರೆ. ಉಚಿತ ಬಸ್ ಪಾಸ್ ನೀಡಿದರೆ ಜನರಿಗೆ ಖುಷಿಯಾಗುತ್ತದೆ. ಆದರೆ ಅದಕ್ಕಾಗಿ ಸರ್ಕಾರ ಇನ್ನಷ್ಟು ಸಾಲ ಮಾಡಬೇಕಾಗುತ್ತದೆ. ತೆರಿಗೆ ಹೆಚ್ಚಿಸಬೇಕಾಗುತ್ತದೆ. ಈಗಾಗಲೇ ಹಲವು ತೆರಿಗೆಗಳನ್ನು ಹೆಚ್ಚಿಸಲಾಗಿದೆ" ಎಂದು ಟೀಕಿಸಿದರು.

"ಮುಖ್ಯಮಂತ್ರಿಗೆ ಆಡಳಿತದ ಅನುಭವವಿದೆ. ಆದರೆ ಆ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬೇಕು. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು" ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಸಂಬಂಧದ ಕುರಿತು ವ್ಯಂಗ್ಯವಾಡಿದ ಅವರು, "ರಾಸುಗಳಿಗೆ ತೂಂಡಿ ಹಾಕುವಂತೆ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ತೂಂಡಿ ಹಾಕುವ ಕೆಲಸ ಮಾಡಿದ್ದಾರೆ. ಈಗ ಸಚಿವರು ತಮಗೆ ಬೇಕಾದ ಖಾತೆಗಾಗಿ ಒತ್ತಾಯಿಸುತ್ತಿದ್ದಾರೆ" ಎಂದು ಹೇಳಿದರು.

ಬೆಂಗಳೂರು ನಗರದ ಸಮಸ್ಯೆಗಳ ಕುರಿತು ಹಾಸ್ಯ ಚಟಾಕಿ ಹಾರಿಸಿದ ಸಿ.ಟಿ. ರವಿ, "ಮಳೆ ಬಂದರೆ ಬೆಂಗಳೂರು ಮುಳುಗುತ್ತದೆ, ಮಳೆ ಬಾರದಿದ್ದರೂ ಸಮಸ್ಯೆ. ಆದರೆ ಎರಡೂ ಸಂದರ್ಭಗಳಲ್ಲಿ ರಾಜಕೀಯವಾಗಿ ಅವರಿಗೆ ಲಾಭವಾಗುತ್ತದೆ" ಎಂದು ವ್ಯಂಗ್ಯವಾಡಿದರು.

"ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಮುಖ್ಯಮಂತ್ರಿ ನೀಡಲಿ ಎಂಬುದು ನಮ್ಮ ನಿರೀಕ್ಷೆ. ಆದರೆ ಅದು ಸಾಧ್ಯವೇ ಎಂಬ ಪ್ರಶ್ನೆ ಇದೆ. ರಾಜ್ಯ ಸಾಲದ ಸುಳಿಯಿಂದ ಹೊರಬರಬೇಕು" ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, "ಡಿ.ಕೆ. ಶಿವಕುಮಾರ್ ಅವರ ಆಸ್ತಿ ಗಳಿಕೆಯ ವೇಗದಂತೆ ರಾಜ್ಯದ ಅಭಿವೃದ್ಧಿಯೂ ಆಗಲಿ" ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಒಂದು ಕಡೆ ಆಲೂಗಡ್ಡೆ ಹಾಕಿ ಮತ್ತೊಂದು ಕಡೆ ಚಿನ್ನ ತೆಗೆಯುವಂತೆ ರಾಜ್ಯದಲ್ಲಿಯೂ ಅಭಿವೃದ್ಧಿ ಮಾಡಲಿ" ಎಂದು ವ್ಯಂಗ್ಯವಾಡಿದರು.

ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, "ಅಣ್ಣಾಮಲೈ ಅವರು ತಮಿಳುನಾಡು ಹಾಗೂ ರಾಷ್ಟ್ರದ ಹಿತ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಅವರು ತಮ್ಮದೇ ಆದ ದಾರಿಯನ್ನು ಕಂಡುಕೊಂಡಿದ್ದಾರೆ. ಅವರಿಗೆ ಶುಭವಾಗಲಿ" ಎಂದರು.

"ತಮಿಳುನಾಡಿನಲ್ಲಿ ಬಿಜೆಪಿಗೆ ಇದುವರೆಗೆ ದೊಡ್ಡ ಲಾಭವಾಗಿಲ್ಲ ಎಂದಾದರೆ ನಷ್ಟದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಅಣ್ಣಾಮಲೈ ಒಳ್ಳೆಯ ವ್ಯಕ್ತಿ. ದೇಶಭಕ್ತಿ ಮತ್ತು ತಮಿಳು ಗೌರವವನ್ನು ಉಳಿಸಿಕೊಂಡು ಹೋಗುವವರಿಗೆ ಒಳ್ಳೆಯದಾಗಲಿ" ಎಂದು ಹೇಳಿದರು.

ಖಾತೆ ಹಂಚಿಕೆ ಗೊಂದಲ ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ-ಸಿಟಿ ರವಿ-Confusion over portfolio allocation will affect the government's administration – C.T. Ravi

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close