SUDDILIVE || SHIVAMOGA
ಧರ್ಮಸ್ಥಳದ ಮಂಜುನಾಥನನ್ನು ರಾಜಕೀಯಕ್ಕೆ ಎಳೆಯಬೇಡಿ: ವಿಜಯೇಂದ್ರಗೆ ಈಶ್ವರಪ್ಪ ಸಲಹೆ-Don't drag Dharmasthala's Manjunatha into politics: Eshwarappa advises Vijayendra
ರಾಜ್ಯಸಭೆ ಚುನಾವಣೆಯ ಕ್ರಾಸ್ ವೋಟಿಂಗ್ ವಿವಾದದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ವಿಚಾರಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ರಾಜಕೀಯ ವಿವಾದಗಳಿಗೆ ಎಳೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳವು ದೇಶದ ಕೋಟ್ಯಂತರ ಭಕ್ತರು ಆರಾಧಿಸುವ ಪವಿತ್ರ ಕ್ಷೇತ್ರವಾಗಿದ್ದು, ರಾಜಕೀಯ ಲಾಭ ಅಥವಾ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ವಿಚಾರದಲ್ಲಿ ದೇವರನ್ನು ಓರೆಗೆ ಹಚ್ಚುವುದು ಸರಿಯಲ್ಲ ಎಂದು ಹೇಳಿದರು. ವಿಜಯೇಂದ್ರ ಅವರು ನೀಡಿರುವ ಆಣೆ-ಪ್ರಮಾಣದ ಹೇಳಿಕೆಯನ್ನು ಹಿಂಪಡೆಯಬೇಕು ಎಂಬುದು ತಮ್ಮ ವೈಯಕ್ತಿಕ ಸಲಹೆ ಎಂದು ತಿಳಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ನಡೆದಿರುವ ಕ್ರಾಸ್ ವೋಟಿಂಗ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಈಶ್ವರಪ್ಪ, ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿಲ್ಲ ಎಂದು ಆರೋಪಿಸಿದರು. ತನಿಖೆಯ ಮೂಲಕ ಯಾರು ಹಣ ನೀಡಿದರು, ಎಷ್ಟು ಪ್ರಮಾಣದಲ್ಲಿ ವ್ಯವಹಾರ ನಡೆದಿದೆ ಎಂಬ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್.ಟಿ. ಸೋಮಶೇಖರ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿದ್ದೇನೆ ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಅಭಿವೃದ್ಧಿಗೆ ಹಣ ಕೊಡುವ ಭರವಸೆ ನೀಡಿದ್ದಾಗಿ ಹೇಳಲಾಗಿದೆ. ಆದರೆ ಅದರ ಹಿಂದಿನ ನಿಜಾಂಶ ತನಿಖೆಯಿಂದ ಹೊರಬರಬೇಕು” ಎಂದು ಹೇಳಿದರು. ಕ್ರಾಸ್ ವೋಟಿಂಗ್ ಪ್ರಕರಣವನ್ನು ಕೇವಲ ರಾಜಕೀಯ ಬೆಳವಣಿಗೆಯಾಗಿ ನೋಡದೆ, ಅದರ ಹಿಂದಿನ ಭ್ರಷ್ಟಾಚಾರದ ಅಂಶಗಳನ್ನೂ ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ್ದ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಯಾರೇ ಆಗಿರಲಿ, ದೇವರ ಮುಂದೆ ರಾಜಕೀಯದ ಆಣೆ-ಪ್ರಮಾಣ ಮಾಡುವುದು ತಪ್ಪು. ಮಂಜುನಾಥ ಸ್ವಾಮಿಗಿಂತ ಯಾರೂ ದೊಡ್ಡವರಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯೊಳಗಿನ ನಾಯಕತ್ವ ಬದಲಾವಣೆ ಅಥವಾ ವಿಜಯೇಂದ್ರ ಅವರ ಕಾರ್ಯವೈಖರಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಆ ವಿಚಾರಗಳನ್ನು ಪಕ್ಷದ ಕೇಂದ್ರ ನಾಯಕತ್ವ ನೋಡಿಕೊಳ್ಳುತ್ತದೆ ಎಂದರು. ತಾವು ಪ್ರಸ್ತುತ ಗಮನ ಹರಿಸಿರುವುದು ರಾಜ್ಯಸಭೆ ಚುನಾವಣೆಯಲ್ಲಿ ನಡೆದಿರುವ ಕ್ರಾಸ್ ವೋಟಿಂಗ್ ಹಾಗೂ ಅದರ ಹಿಂದಿನ ಭ್ರಷ್ಟಾಚಾರದ ಆರೋಪಗಳ ಕುರಿತು ಮಾತ್ರ ಎಂದು ತಿಳಿಸಿದರು.
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಹೊಂದಿರುವ ಲಕ್ಷಾಂತರ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ರಾಜಕೀಯ ನಾಯಕರು ನಡೆದುಕೊಳ್ಳಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.
Don't drag Dharmasthala's Manjunatha into politics: Eshwarappa advises Vijayendra
