100 ಕಳೆದುಹೋದ ಮೊಬೈಲ್‌ಗಳನ್ನ ವಾರಸುದಾರರಿಗೆ ಹಸ್ತಾಂತರ- 100 lost mobile phones handed over to their heirs

 SUDDILIVE || SHIVAMOGGA

100 ಕಳೆದುಹೋದ ಮೊಬೈಲ್‌ಗಳನ್ನ ವಾರಸುದಾರರಿಗೆ ಹಸ್ತಾಂತರ- 100 lost mobile phones handed over to their heirs    
Mobile, heirs

ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಇಐಆರ್ (Central Equipment Identity Register - CEIR) ಪೋರ್ಟಲ್ ಸಹಾಯದಿಂದ ಕಳೆದುಹೋಗಿದ್ದ 100 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮರುಪಡೆಯಲಾದ ಮೊಬೈಲ್‌ಗಳ ಒಟ್ಟು ಮೌಲ್ಯ ಸುಮಾರು 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ನಿಖಿಲ್ ಬಿ ಒಂದು ಅಥವಾ ಎರಡು ವರ್ಷಗಳ ಹಿಂದೆ ಕಳೆದುಹೋದ ಮೊಬೈಲ್‌ಗಳನ್ನೂ ಸಹ ಪತ್ತೆ ಮಾಡಿ ಮಾಲೀಕರಿಗೆ ಮರಳಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಬಹುದು ಅಥವಾ ಸಿಇಐಆರ್ ಪೋರ್ಟಲ್‌ನಲ್ಲಿ ಸ್ವತಃ ದಾಖಲಿಸಬಹುದು. ಮೊಬೈಲ್‌ನ ಐಎಂಇಐ (IMEI) ಸಂಖ್ಯೆಯನ್ನು ನಮೂದಿಸಿದರೆ, ಆ ಸಾಧನವನ್ನು ಬೇರೆ ಯಾರಾದರೂ ಬಳಸಿದ ಸಂದರ್ಭದಲ್ಲಿ ಪೋರ್ಟಲ್ ಮಾಹಿತಿ ಒದಗಿಸುವ ಮೂಲಕ ಪತ್ತೆಹಚ್ಚಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಾಗಿದ್ದ ಮೊಬೈಲ್‌ಗಳನ್ನೂ ವಾಪಸ್ ತರಲಾಗಿದೆ. ಬಸ್ ನಿಲ್ದಾಣ, ಬಟ್ಟೆ ಅಂಗಡಿ, ರಸ್ತೆ ಸಂಚಾರದ ವೇಳೆ ಕಳೆದುಹೋದ ಮೊಬೈಲ್‌ಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.

ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲೇ 100 ಮೊಬೈಲ್‌ಗಳನ್ನು ಮರುಪಡೆದು ಹಸ್ತಾಂತರಿಸಲಾಗಿದ್ದು, 2026ರ ಜನವರಿಯಿಂದ ಇದುವರೆಗೆ ಸುಮಾರು 1000 ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ವಾಪಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಾಮಾನ್ಯವಾಗಿ ಠಾಣೆ ಮಟ್ಟದಲ್ಲೇ ಮೊಬೈಲ್‌ಗಳನ್ನು ಹಸ್ತಾಂತರಿಸಲಾಗುತ್ತಿದ್ದು, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಿ ಒಂದೇ ವೇದಿಕೆಯಲ್ಲಿ ವಿತರಣೆ ಮಾಡಲಾಗಿದೆ ಎಂದರು.

ಇದೇ ವೇಳೆ ಠಾಣೆಗೆ ಬರುವ ಸಾರ್ವಜನಿಕರು ಹಾಗೂ ದೂರುದಾರರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಹೊಸ ಮೇಲ್ಛಾವಣಿ ಮತ್ತು ನಿರೀಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ‘ವಿಕ್ಟಿಂ ಸೆಂಟ್ರಿಕ್ ಪೋಲಿಸಿಂಗ್’ ಪರಿಕಲ್ಪನೆಯಡಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಸೂತ್ಕೋಟೆ ಕೊಲೆ ಪ್ರಕರಣ: ಎರಡು ತಂಡಗಳಿಂದ ತನಿಖೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿಗಳು, ಕುಮ್ಸಿ ಠಾಣೆ ವ್ಯಾಪ್ತಿಯ ಸೂತ್ಕೋಟೆ ಗ್ರಾಮದಲ್ಲಿ ನಡೆದ ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯೂ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. ಮಲಗಿದ್ದ ವೇಳೆ ತಲೆಗೆ ಬಲವಾದ ಹೊಡೆತ ನೀಡಲಾಗಿದ್ದು, ಬಳಿಕ ಚೂಪಾದ ಆಯುಧದಿಂದ ಕುತ್ತಿಗೆಗೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆಸ್ತಿ ಸಂಬಂಧಿತ ವಿವಾದ ಅಥವಾ ವೈಯಕ್ತಿಕ ಸಂಬಂಧಗಳ ವಿಚಾರ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಭೇದಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.

100 lost mobile phones handed over to their heirs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close