ದಾಸನಿಗೆ ಫ್ಲೆಕ್ಸ್ ಹಾಕಿ ಅಭಿಮಾನ ಮೆರೆದ ಅಭಿಮಾನಿಗಳು-ಶಿವಮೊಗ್ಗ ರೌಡಿಸಂ ವಲಯದಲ್ಲಿ ಬಿಸಿ ಚರ್ಚೆ-Fans show their admiration by flexing Dasa - a heated debate in the Shivamogga rowdism circle

SUDDILIVE | SHIVAMOGGA

ದಾಸನಿಗೆ ಫ್ಲೆಕ್ಸ್ ಹಾಕಿ ಅಭಿಮಾನ ಮೆರೆದ ಅಭಿಮಾನಿಗಳು-ಶಿವಮೊಗ್ಗ ರೌಡಿಸಂ ವಲಯದಲ್ಲಿ ಬಿಸಿ ಚರ್ಚೆ-Fans show their admiration by flexing Dasa - a heated debate in the Shivamogga rowdism circle        
Fans, flexing

ಶಿವಮೊಗ್ಗದ ರೌಡಿಸಂ ವಲಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದನೆಂದು ಹೇಳಲಾಗುತ್ತಿದ್ದ ನರಸಿಂಹ ಯಾನೆ ದಾಸನ ಹತ್ಯೆ ಪ್ರಕರಣ ಇದೀಗ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ಹತ್ಯೆ ಆರೋಪಿಗಳು ಪೊಲೀಸರಿಗೆ ಶರಣಾಗುತ್ತಿದ್ದರೆ, ಮತ್ತೊಂದೆಡೆ ದಾಸನ ಅಭಿಮಾನಿಗಳು ನಗರದ ವಿವಿಧೆಡೆ ಫ್ಲೆಕ್ಸ್‌ಗಳನ್ನು ಅಳವಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಉಷಾ ಸರ್ಕಲ್ ಸಮೀಪ ದಾಸನ ಅಭಿಮಾನಿಗಳು ಅಳವಡಿಸಿರುವ ಫ್ಲೆಕ್ಸ್‌ಗಳು ಸಾರ್ವಜನಿಕರ ಗಮನ ಸೆಳೆದಿವೆ. ರಾಜಕೀಯ ನಾಯಕರಿಗೆ ಸಲ್ಲಿಸುವ ರೀತಿಯ ಗೌರವವನ್ನು ಅಭಿಮಾನಿಗಳು ತೋರಿರುವುದು ಚರ್ಚೆಗೆ ಕಾರಣವಾಗಿದೆ.

ದಾಸನ ಹಿನ್ನೆಲೆಯನ್ನು ಅವಲೋಕಿಸಿದರೆ, ಸೀಗೆಹಟ್ಟಿಯಲ್ಲಿ ನೆಲೆಸಿದ್ದ ಆತ ಗಣಪತಿ ವಿಸರ್ಜನೆ ವೇಳೆ ನಡೆದ ಗಲಾಟೆಯ ಬಳಿಕ ಅಲ್ಲಿಂದ ತೆರಳಿ ರಾಗಿಗುಡ್ಡದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಬಳಿಕ ಗೋವಿಂದಪುರದ ಆಶ್ರಯ ಮನೆಯಲ್ಲಿ ವಾಸವಿದ್ದ ದಾಸ, ವಿವಿಧ ಕ್ರಿಮಿನಲ್ ಪ್ರಕರಣಗಳ ಮೂಲಕ ಪೊಲೀಸ್ ದಾಖಲೆಗಳಲ್ಲಿ ಗುರುತಿಸಿಕೊಂಡಿದ್ದ. ಇಸ್ಪೀಟ್, ಎನ್‌ಡಿಪಿಎಸ್ ಹಾಗೂ 307 ಪ್ರಕರಣಗಳಲ್ಲಿಯೂ ಅವನ ಹೆಸರು ಕೇಳಿಬಂದಿತ್ತು.

ಭದ್ರಾವತಿಯಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದ ದಾಸನ ಹತ್ಯೆ, ಇತ್ತೀಚೆಗೆ ವಿಶ್ವ ಯಾನೆ ಮುದ್ದೆ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದ ಕೆಲವೇ ದಿನಗಳ ಅಂತರದಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರೌಡಿಸಂ ವಲಯದಲ್ಲಿ ಪ್ರಾಬಲ್ಯಕ್ಕಾಗಿ ಈ ಕೃತ್ಯ ನಡೆದಿರಬಹುದೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬು ಯಾನೆ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಕೋಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ತಮ್ಮ ಸುರಕ್ಷತೆಯ ದೃಷ್ಟಿಯಿಂದಲೇ ಅವರು ಪೊಲೀಸರ ಮೊರೆ ಹೋಗಿರಬಹುದೆಂಬ ಮಾತುಗಳೂ ಕೇಳಿಬರುತ್ತಿವೆ.

ತನಿಖಾ ಮೂಲಗಳ ಪ್ರಕಾರ, ಮಂಡ್ಲಿ ಆಟೋ ಸ್ಟ್ಯಾಂಡ್ ಬಳಿ ಇದ್ದ ಶಬರೀಶ್‌ನ ಆಟೋವನ್ನು ಬಳಸಿಕೊಂಡು ಬಂದಿದ್ದ ತಂಡ ದಾಳಿಗೆ ಮುಂದಾಗಿತ್ತು ಎನ್ನಲಾಗಿದೆ. ದಾಸನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಂಕ್ ಬಾಲು ಹತ್ಯೆ ಪ್ರಕರಣದ ಬಳಿಕ ಕ್ರಿಮಿನಲ್ ವಲಯದಲ್ಲಿ ಹೆಸರು ಮಾಡಿದ್ದ ಅಂಬು ಯಾನೆ ಅನಿಲ್ ಮತ್ತು ಆತನ ತಂಡವೇ ಈ ಕೃತ್ಯದಲ್ಲಿ ಭಾಗಿಯಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹತ್ಯೆಯ ಹಿಂದಿನ ನಿಖರ ಕಾರಣ ಏನು? ಹಳೆಯ ವೈಷಮ್ಯವೇ ಅಥವಾ ಪ್ರಾಬಲ್ಯದ ಪೈಪೋಟಿಯೇ? ಎಂಬ ಪ್ರಶ್ನೆಗಳಿಗೆ ತನಿಖೆಯ ನಂತರವೇ ಸ್ಪಷ್ಟ ಉತ್ತರ ಸಿಗಬೇಕಿದೆ.

ಪ್ರಸ್ತುತ ದಾಸನ ಹತ್ಯೆ ಪ್ರಕರಣ ಶಿವಮೊಗ್ಗ ಹಾಗೂ ಭದ್ರಾವತಿ ರೌಡಿಸಂ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯ ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ.

Fans show their admiration by flexing Dasa - a heated debate in the Shivamogga rowdism circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close