SUDDILIVE || SHIVAMOGGA
ವಿಶ್ವ ಯಾನೆ ಮುದ್ದೆ ಮೇಲೆ ಮಾರಣಾಂತಿಕ ಹಲ್ಲೆ-ನಾಲ್ವರ ವಿರುದ್ಧ ಪ್ರಕರಣ ದಾಖಲು-Fatal attack on Vishwa yane Mudde - Case registered against four
ಭದ್ರಾವತಿ, ಜೂನ್ 8: ಭದ್ರಾವತಿ ನಗರದ ಅನ್ವರ್ ಕಾಲೋನಿಯ ಕಾಫಿ ಪ್ಯಾರಡೈಸ್ ಟೀ ಕ್ಯಾಂಟೀನ್ ಬಳಿ ವಿಶ್ವ ಅಲಿಯಾಸ್ ಮುದ್ದೆ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಸಂಬಂಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಅಂಗಡಿ ಬಳಿ ನಡೆದ ದಾಳಿ
ದೂರುದಾರ ಮಹಬೂಬ್ ಫಯಾಜ್ ನೀಡಿರುವ ದೂರಿನ ಪ್ರಕಾರ, ಜೂನ್ 8ರಂದು ಮಧ್ಯಾಹ್ನ ಟೀ ಅಂಗಡಿ ಬಳಿ ವಿಶ್ವ ಅಲಿಯಾಸ್ ಮುದ್ದೆ ಇದ್ದ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಕಾರಿನಿಂದ ಇಳಿದ ಗುಂಪು ಲಾಂಗ್‌ಗಳನ್ನು ಹಿಡಿದುಕೊಂಡು ವಿಶ್ವನನ್ನು ಸುತ್ತುವರಿದು ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಲೆ, ಕುತ್ತಿಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯ
ಆರೋಪಿಗಳು ವಿಶ್ವನ ತಲೆ, ಕುತ್ತಿಗೆ, ಕಾಲು ಹಾಗೂ ಕೈಗಳಿಗೆ ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ವಿಶ್ವ ರಕ್ತಸ್ರಾವಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಬಳಿಕ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಾಲ್ವರ ವಿರುದ್ಧ ಎಫ್‌ಐಆರ್
ಪ್ರಮೋದ್ ಅಲಿಯಾಸ್ ಗಾಂಧಿ, ಪ್ರಕಾಶ್ ಅಲಿಯಾಸ್ ಕರಾಟೆ ಪ್ರಕಾಶ್, ಭರತ್ ಅಲಿಯಾಸ್ ಕೊಳಕ ಭರತ್ ಹಾಗೂ ಮತ್ತೋರ್ವನ ವಿರುದ್ಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ಆರಂಭ
ಘಟನೆಯ ಕುರಿತು ಭದ್ರಾವತಿ ಹಳೆನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಲ್ಲೆಯ ನಿಖರ ಕಾರಣ ಮತ್ತು ಆರೋಪಿಗಳ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.
ಮುದ್ದೆ ಮತ್ತು ಇತರರ ವಿರುದ್ಧ ಷರತ್ತು ಬದ್ಧ ಜಾಮೀನು
2025 ಆಗಸ್ಟ್ ಮೊದಲನೇ ವಾರದಲ್ಲಿ ಶಿವಮೊಗ್ಗದಲ್ಲಿ ಎಸಿ ಕೋರ್ಟ್ ಮುಗಿಸಿಕೊಂಡು ಭದ್ರಾವತಿಗೆ ಬಂದಿದ್ದ ಭರತ್ ನನ್ನ ವಿಶ್ವ ಯಾನೆ ಮುದ್ದೆ, ಯಡಹಳ್ಳಿ ಟಾಮ, ಕೋಟೇಶ್ ಮತ್ತು ಇತರರು ಇನ್ನೋವಾ ಕಾರಿನಲ್ಲಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಲಾಂಗು ಬೀಸಿ ಕೊಲೆಯತ್ನ ನಡೆಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ವಿಶ್ವಯವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಇದಕ್ಕೂ ಮೊದಲು ಶತೃ ನಾಶಕ್ಕಾಗಿ ವಿಶ್ವ ಹಳದಮ್ಮ ದೇವಿಗೆ ಪೂಜೆ ಮಾಡಿಸಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಗೂ ಮೊದಲು ಪ್ರಮೋದ್ ಯಾನೆ ಗಾಂಧಿ ಮತ್ತಿತರು ವಿಶ್ವ ಮತ್ತು ಇತರರ ಮೇಲೆ ಹಲ್ಲೆ ನಡೆಸಿದ್ದರು. ಇದಾದ ನಂತರ ಪ್ರಮೋದ್ ನ ಎದುರಾಳಿಗಳು RIP ಎಂದು ಬರೆದು ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದರು.
Fatal attack on Vishwa yane Mudde - Case registered against four
