SUDDILIVE || THIRTHAHALLI
ಯು ಬಿಟ್ ಕಾಯಿನ್ ಗೆ ಹೂಡುವಂತೆ ನಂಬಿಸಿ ವಂಚನೆ- Fraud by convincing you to invest in 'U Bitcoin'
ಶಿವಮೊಗ್ಗ: ಹೆಚ್ಚಿನ ಲಾಭದ ಆಮಿಷವೊಡ್ಡಿ ನಕಲಿ ಹೂಡಿಕೆ ಯೋಜನೆ ಮೂಲಕ ಸುಮಾರು ₹48 ಲಕ್ಷ ಹಣ ವಂಚಿಸಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯ ನಿವಾಸಿ ಅರುಣ್ ಕುಮಾರ್ ಹಾಲಪ್ಪ ನಾಯ್ಕ ನೀಡಿದ ದೂರಿನ ಮೇರೆಗೆ, ಎಂ. ಕುಮಾರ್ (ಎ1), ಕುಸುಮಾ (ಎ2), ಜೀವನ್ (ಎ3), ಸಮೃದ್ಧಿ (ಎ4) ಹಾಗೂ ಶ್ವೇತಾ (ಎ5) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಎಂ. ಕುಮಾರ್ ಅವರು ತಾವು ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾಗಿದ್ದು, "ಯು-ಬಿಟ್ ಕಾಯಿನ್" ಎಂಬ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಹಾಗೂ ಗ್ಯಾರಂಟಿ ರಿಟರ್ನ್ ದೊರೆಯುತ್ತದೆ ಎಂದು ನಂಬಿಸಿದ್ದರು. ತಮ್ಮ ಮೊಬೈಲ್‌ನಲ್ಲಿ ಕಂಪನಿಯ ಲಾಭದ ವಿವರಗಳನ್ನು ತೋರಿಸಿ ವಿಶ್ವಾಸ ಮೂಡಿಸಿ, ದೂರುದಾರರಿಂದ ₹11 ಲಕ್ಷ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಹೂಡಿಕೆಯ ಹಣವನ್ನಾಗಲಿ, ಲಾಭವನ್ನಾಗಲಿ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯಲ್ಲಿ ಇನ್ನೂ ಹಲವರಿಂದಲೂ ಹಣ ಪಡೆದು, ಒಟ್ಟು ₹48 ಲಕ್ಷ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 316(2), 318(4), 351(2), 61(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
