SUDDILIVE || SHIVAMOGGA
ನಾಜಿಯಾ ಇಲಾಹಿ ಖಾನ್ ವಿರುದ್ಧ ಪ್ರತಿಭಟನೆ; ಬಂಧನಕ್ಕೆ ಆಗ್ರಹ-Protest against Nazia Elahi Khan; Demand for her arrest
ಭದ್ರಾವತಿ: ಪ್ರವಾದಿ ಮೊಹಮ್ಮದ್ ಹಾಗೂ ಅವರ ಧರ್ಮಪತ್ನಿ ಹಜರತ್ ಆಯಿಷಾ ಅವರ ಕುರಿತು ಬಿಜೆಪಿಯ ವಕ್ತಾರೆ ಹಾಗೂ ವಕೀಲರಾದ ನಾಜಿಯಾ ಇಲಾಹಿ ಖಾನ್ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಅವರನ್ನು ಬಂಧಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಭದ್ರಾವತಿ ತಾಲೂಕು ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಟಿಪ್ಪುಸುಲ್ತಾನ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ನಾಜಿಯಾರವರು ಪ್ರವಾದಿಗರ ಪತ್ನಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದಲ್ಲಿ ಮಾತನಾಡಿ ಈ ಭಾಗದ ಲಕ್ಷಾಂತರ ಮುಸ್ಲೀಂರ ಭಾವನೆಗೆ ಧಕ್ಕೆ ತಂದಿರುವುದಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ.
ಹೊಳೆಹೊನ್ನೂರು ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ನಾಜಿಯಾ ಇಲಾಹಿ ಖಾನ್ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಹಾಗೂ ಕೂಡಲೇ ಬಂಧಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.
ಬಳಿಕ ಉಪತಹಶೀಲ್ದಾರ್ ಮಂಜಾನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆ ಶಾಂತಿಯುತವಾಗಿ ನಡೆದು ಬಳಿಕ ಮುಕ್ತಾಯಗೊಂಡಿತು.

