ಶಿವಮೊಗ್ಗದಲ್ಲಿ ಜೂನ್ 22ರಂದು ಗೋವರ್ಧನ ಟ್ರಸ್ಟ್ ಕೇಂದ್ರ ಕಚೇರಿ, ಗೋವರ್ಧನ ಎಂಟರ್‌ಪ್ರೈಸಸ್ ಉದ್ಘಾಟನೆ-Govardhan Trust Head Office, Govardhan Enterprises to be Inaugurated in Shivamogga on June 22nd

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಜೂನ್ 22ರಂದು ಗೋವರ್ಧನ ಟ್ರಸ್ಟ್ ಕೇಂದ್ರ ಕಚೇರಿ, ಗೋವರ್ಧನ ಎಂಟರ್‌ಪ್ರೈಸಸ್ ಉದ್ಘಾಟನೆ-Govardhan Trust Head Office, Govardhan Enterprises to be Inaugurated in Shivamogga on June 22nd    
Govardhan, trust

ಶಿವಮೊಗ್ಗ, ಜೂ.19: ಗೋವರ್ಧನ ಟ್ರಸ್ಟ್‌ನ ಕೇಂದ್ರ ಕಚೇರಿ ಹಾಗೂ ಗೋವರ್ಧನ ಎಂಟರ್‌ಪ್ರೈಸಸ್ ಮಾರಾಟ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಜೂನ್ 22ರಂದು ಬೆಳಗ್ಗೆ 9.30ಕ್ಕೆ ನಗರದ ಎಸ್‌ಪಿಎಂ ರಸ್ತೆಯಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ. ಶೇಷಾಚಲ ತಿಳಿಸಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಟ್ರಸ್ಟ್‌ನ ಮಹಾಪೋಷಕ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಟ್ರಸ್ಟ್ ಅಧ್ಯಕ್ಷ ಕೆ.ಇ. ಕಾಂತೇಶ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿಗಳಾದ ಎಂ. ನಾಗೇಶ್ ಹಾಗೂ ರಮೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ಹೇಳಿದರು.

ನಗರದ ಮಾರಿಕಾಂಬ ದೇವಸ್ಥಾನದ ಸಮೀಪ ಟ್ರಸ್ಟ್‌ನ ಸ್ವಂತ ಕಚೇರಿಯನ್ನು ಆರಂಭಿಸಲಾಗುತ್ತಿದ್ದು, ರಾಜ್ಯದ ವಿವಿಧ ಗೋಶಾಲೆಗಳಲ್ಲಿ ಉತ್ಪಾದನೆಯಾಗುವ ಗೋ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರವಾಗಲಿದೆ. ‘ಗೋವರ್ಧನ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ರೂಪುಗೊಂಡಿರುವ ಈ ಯೋಜನೆಯಡಿ 100ಕ್ಕೂ ಹೆಚ್ಚು ವಿಧದ ಗೋ ಉತ್ಪನ್ನಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಕನ್ನೇರಿ ಗೋಶಾಲೆ, ಯತ್ನಾಳ್ ಗೋಶಾಲೆ, ರಾಮಚಂದ್ರಾಪುರ ಮಠದ ಗೋಶಾಲೆ ಹಾಗೂ ಸುರಭಿ ಗೋಶಾಲೆಗಳ ಉತ್ಪನ್ನಗಳು ಇಲ್ಲಿ ದೊರೆಯಲಿದ್ದು, ಆರಂಭಿಕ ಹಂತದಲ್ಲಿ 30ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕೆ.ಇ. ಕಾಂತೇಶ್, ಗೋವರ್ಧನ ಟ್ರಸ್ಟ್ ಸ್ಥಾಪನೆಯಾದ ಮೊದಲ ವರ್ಷದಲ್ಲೇ ಗೋವಿನ ಸಂರಕ್ಷಣೆ ಹಾಗೂ ಗೋಶಾಲೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು. ಪ್ರತಿ ತಿಂಗಳು ಮೂರು ಗೋಶಾಲೆಗಳಿಗೆ ಮೇವು ಪೂರೈಕೆ, 22 ಎಕರೆ ಪ್ರದೇಶದಲ್ಲಿ ಮೇವು ಬೆಳೆ ಯೋಜನೆ, ಗೋಮಾತೆ ಜಾಗೃತಿ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವಿವರಿಸಿದರು.

ಕನ್ಹೇರಿ ಮಠ, ರಾಮಚಂದ್ರಾಪುರ ಮಠ, ಯತ್ನಾಳ್ ಹಾಗೂ ಸುರಭಿ ಗೋಶಾಲೆಗಳ ಉತ್ಪನ್ನಗಳನ್ನು ಮಾರಾಟ ಕೇಂದ್ರದಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಗೋಸಂರಕ್ಷಣಾ ಕಾರ್ಯಗಳಿಗೆ ವಿವಿಧ ಸಮುದಾಯಗಳ ಜನರು ಸಹಕಾರ ನೀಡುತ್ತಿದ್ದಾರೆ. ಕೆಲ ಮುಸ್ಲಿಂ ಸಮುದಾಯದ ಸದಸ್ಯರೂ ದೇಣಿಗೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿ ಎಂ. ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close