ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅನುಮತಿ- Light vehicles allowed to ply at Hulikal Ghat from today

 SUDDILIVE || SHIVAMOGGA

ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅನುಮತಿ- Light vehicles allowed to ply at Hulikal Ghat from today   

Light, vehicle

ಶಿವಮೊಗ್ಗ, ಜೂ.12: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್ ಮಾರ್ಗದಲ್ಲಿ ಇಂದಿನಿಂದ (ಜೂನ್ 12) ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಕುರಿತು ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಳೆದ ಏಪ್ರಿಲ್ 9ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನ ಬಳಿ ಭೂಕುಸಿತ ಸಂಭವಿಸಿ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಸ್ತಿ ಕಟ್ಟೆಯಿಂದ ಹೊಸ ಅಂಗಡಿವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಬಳಿಕ ಪ್ರಯಾಣಿಕರ ಅನುಕೂಲಕ್ಕಾಗಿ ಚಂಡಿಕಾಂಬ ದೇವಸ್ಥಾನದ ಬಳಿ ಮೆಟ್ಟಿಲು ಮಾರ್ಗದ ಮೂಲಕ ವಾಹನಗಳ ಅದಲು-ಬದಲು ವ್ಯವಸ್ಥೆ ಮಾಡಲಾಗಿತ್ತು.

ಪ್ರಸ್ತುತ ತಿರುವಿನ ಬಳಿ ತಡೆಗೋಡೆ ನಿರ್ಮಾಣ, ಮಣ್ಣಿನ ಏರಿ ಹಾಗೂ ಲೀನ್ ಕಾಂಕ್ರೀಟ್ ಅಳವಡಿಕೆ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿ ಆಧರಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಆದರೆ ಭೂಕುಸಿತದ ಸಾಧ್ಯತೆ ಇನ್ನೂ ಇರುವುದರಿಂದ ಸುರಕ್ಷತಾ ಕ್ರಮವಾಗಿ ಎಚ್ಚರಿಕೆ ಫಲಕಗಳು, ತಡೆಗೋಡೆಗಳು, ಮಾಹಿತಿ ಫಲಕಗಳು, ರಾತ್ರಿ ಸಂಚಾರಕ್ಕಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್ ಅಳವಡಿಸಲಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಮತ್ತು 116ರ ಅನ್ವಯ ಜಾರಿಯಲ್ಲಿದ್ದ ಸಂಪೂರ್ಣ ವಾಹನ ಸಂಚಾರ ನಿಷೇಧದ ಆದೇಶವನ್ನು ಹಿಂಪಡೆದು, ಬಾಳೆಬರೆ (ಹುಲಿಕಲ್) ಘಾಟ್ ಮಾರ್ಗದಲ್ಲಿ ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Light vehicles allowed to ply at Hulikal Ghat from today

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close