SUDDILIVE || SHIKARIPURA
ಸಿಇಟಿಯಲ್ಲಿ ಕಡಿಮೆ ಅಂಕ: ವಿಷ ಸೇವಿಸಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವು-Low score in CET: Student dies after consuming poison due to ineffective treatment
ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ)ಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 18 ವರ್ಷದ ಜಯಂತ್ ಎಂದು ಗುರುತಿಸಲಾಗಿದೆ. ಈತ ಶಿಕಾರಿಪುರ ಪಟ್ಟಣದ ವಿನಾಯಕನಗರ ನಿವಾಸಿಯಾಗಿದ್ದು, ಖಾಸಗಿ ಬಸ್ ಏಜೆಂಟ್ ಹಾಲೇಶ್ ಅವರ ಪುತ್ರನಾಗಿದ್ದಾನೆ.
ಜೂನ್ 6ರಂದು ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರಿಂದ ಮನನೊಂದ ಜಯಂತ್, ಸುಮಾರು 20 ದಿನಗಳ ಹಿಂದೆ ಮನೆಯಲ್ಲಿ ಇದ್ದ ಕೀಟನಾಶಕ ಸೇವಿಸಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಆತನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಮಣಿಪಾಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಯಂತ್ ಮೃತಪಟ್ಟಿದ್ದಾನೆ.
ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸೂಚನೆ: ಪರೀಕ್ಷೆಯ ಫಲಿತಾಂಶ ಅಥವಾ ಅಂಕಗಳು ಜೀವನದ ಅಂತಿಮ ನಿರ್ಧಾರವಲ್ಲ. ನಿರಾಶೆ ಅಥವಾ ಮಾನಸಿಕ ಒತ್ತಡ ಅನುಭವಿಸುತ್ತಿರುವವರು ತಮ್ಮ ಕುಟುಂಬದವರು, ಸ್ನೇಹಿತರು, ಶಿಕ್ಷಕರು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಮಾತನಾಡುವುದು ಅತ್ಯಂತ ಮುಖ್ಯ. ನೆರವು ಕೇಳುವುದು ಧೈರ್ಯದ ಹೆಜ್ಜೆಯಾಗಿದೆ.
