SUDDILIVE || SHIVAMOGGA
ಶಿವಮೊಗ್ಗದಲ್ಲಿ ಮೃತ ಸ್ಥಿತಿಯಲ್ಲಿ ಗಂಡು ಭ್ರೂಣ ಪತ್ತೆ; ಪ್ರಕರಣ ದಾಖಲು-Male Fetus Found Dead in Shivamogga; Case Registered
ಶಿವಮೊಗ್ಗ, ಜೂನ್ 19: ಶಿವಮೊಗ್ಗ ನಗರದ ಆರ್.ಎಂ.ಎಲ್. ನಗರದ ಭಾರತೀಯ ಸಭಾ ಭವನದ ಹಿಂಭಾಗದ ರಸ್ತೆ ಬದಿಯಲ್ಲಿ ಮೃತ ಸ್ಥಿತಿಯಲ್ಲಿ ಗಂಡು ಭ್ರೂಣ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 18ರಂದು ಮಧ್ಯಾಹ್ನ 12.42ರ ಸುಮಾರಿಗೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ತೆರಳಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳ ಪರಿಶೀಲನೆ ನಡೆಸಿದಾಗ ರಸ್ತೆ ಬದಿಯಲ್ಲಿ ಗಂಡು ಭ್ರೂಣ ಬಿದ್ದಿರುವುದು ಕಂಡುಬಂದಿದೆ. ಬಳಿಕ ಪೊಲೀಸ್ ಸಹಾಯದೊಂದಿಗೆ ಭ್ರೂಣವನ್ನು ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಗರ್ಭಧಾರಣೆ ಬಳಿಕ ಪ್ರಸವಗೊಂಡ ಭ್ರೂಣವನ್ನು ಅಥವಾ ಜನನವನ್ನು ಮರೆಮಾಚುವ ಉದ್ದೇಶದಿಂದ ಯಾರೋ ದುಷ್ಕರ್ಮಿಗಳು ಭ್ರೂಣವನ್ನು ರಸ್ತೆ ಬದಿಗೆ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 94ರಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Male Fetus Found Dead in Shivamogga; Case Registered
