SUDDILIVE || SHIVAMOGGA
ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ನವೀಕೃತ ಕಟ್ಟಡ ಲೋಕಾರ್ಪಣೆ-NES Advanced Studies renovated building inaugurated
ಭಾಷೆಯ ವೈವಿಧ್ಯತೆಯನ್ನು ಬೆಳೆಸಿದಾಗ ಮಾತ್ರ ಸಮಾಜದ ಸಂಸ್ಕೃತಿ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಎನ್ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 17 ವರ್ಷಗಳಲ್ಲಿ ಸಂಸ್ಥೆ ಹಲವು ಸವಾಲುಗಳನ್ನು ಎದುರಿಸಿ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವೂ ಅಗತ್ಯವಾಗಿದ್ದು, ಜೀವನವೇ ಅತ್ಯುತ್ತಮ ಶಿಕ್ಷಕ ಎಂಬ ಅರಿವಿನೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಮೂಲಸೌಕರ್ಯಗಳನ್ನು ಒದಗಿಸುವುದು ಮಾತ್ರ ಉನ್ನತ ಶಿಕ್ಷಣದ ಬೆಳವಣಿಗೆಗೆ ಸಾಕಾಗುವುದಿಲ್ಲ ಎಂದರು. ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿರುವ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಏಕೆ ಬರಬೇಕು ಎಂಬ ಪ್ರಶ್ನೆಗೆ ಶಿಕ್ಷಣ ಸಂಸ್ಥೆಗಳು ಉತ್ತರಿಸಬೇಕಾಗಿದೆ ಎಂದು ಹೇಳಿದರು. ಕೇವಲ ಮಾಹಿತಿ ನೀಡುವ ಬೋಧನಾ ಪದ್ಧತಿಯಿಂದ ಹೊರಬಂದು, ವಿಶ್ಲೇಷಣಾತ್ಮಕ ಹಾಗೂ ನಾವೀನ್ಯತೆಯ ಚಿಂತನೆ ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ 95ಕ್ಕೂ ಹೆಚ್ಚು ಜಾತಿಯ ಹಣ್ಣಿನ ಗಿಡಗಳನ್ನು ಒಳಗೊಂಡ ನೂತನ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಲಾಯಿತು. ಜೊತೆಗೆ ಆಧುನಿಕ ಕಂಪ್ಯೂಟರ್ ಲ್ಯಾಬ್, ನವೀಕೃತ ಗ್ರಂಥಾಲಯ, ಸಭಾಂಗಣ, ಕಿರು ಸಭಾಂಗಣ, ಪ್ರಾಂಶುಪಾಲರ ಕೊಠಡಿ ಹಾಗೂ ಹೊಸ ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಶಿವಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
NES Advanced Studies renovated building inaugurated

