ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆ- SDPI District Representatives Meeting

 SUDDILIVE || SHIVAMOGGA

ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆ- SDPI District Representatives Meeting   

Sdpi, meeting

ಶಿವಮೊಗ್ಗ, ಜೂ.17: ಎಸ್‌ಡಿಪಿಐ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾ ಪ್ರತಿನಿಧಿಗಳ ಸಭೆ (ಡಿಆರ್‌ಸಿ) ಬುಧವಾರ ನಗರದ ಎನ್.ಟಿ. ರಸ್ತೆಯ ಫಲಕ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷ ಜೀಲಾನ್ ಖಾನ್ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮುಖ್ಯ ಅತಿಥಿಯಾಗಿ ಹಾಗೂ ರಾಜ್ಯ ಕಾರ್ಯದರ್ಶಿ ಅಕ್ರಂ ಮೈಸೂರು ಅತಿಥಿಯಾಗಿ ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್ ಅಹ್ಮದ್, ಅಬ್ದುಲ್ ಜಮೀರ್, ಜಿಲ್ಲಾ ಉಪಾಧ್ಯಕ್ಷ ಸಲೀಂ ಖಾನ್ ಹಾಗೂ ಖಜಾಂಚಿ ಅಬ್ದುಲ್ ರಹೀಂ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಕಳೆದ 18 ತಿಂಗಳ ಪಕ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಲಾಯಿತು. ಬಳಿಕ ಜಿಲ್ಲೆಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗಕ್ಕೆ ನೀಡಲು ಆಗ್ರಹ

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಜೀಲಾನ್ ಖಾನ್, ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗ ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಶಿವಮೊಗ್ಗವು ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾಗಿದ್ದು, ಬಸ್, ರೈಲು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆ ಹೊಂದಿರುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಆರೋಗ್ಯ ಸೇವೆಗಳ ಬಲವರ್ಧನೆಗೆ ಒತ್ತಾಯ

ಜಿಲ್ಲಾ ಉಪಾಧ್ಯಕ್ಷ ಸಲೀಂ ಖಾನ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಪ್ರತಿ ತಾಲೂಕಿನಲ್ಲಿ ಪರಿಣಿತ ವೈದ್ಯರನ್ನು ನೇಮಿಸಿ, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮಹಾನಗರ ಪಾಲಿಕೆ ಚುನಾವಣೆ ಶೀಘ್ರ ನಡೆಸಬೇಕು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಹ್ಮದ್ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಹೆಚ್ಚಾಗಿದ್ದು, ಚುನಾಯಿತ ಪ್ರತಿನಿಧಿಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಾರ್ಡ್ ಮರುವಿಂಗಡಣೆ ನೆಪದಲ್ಲಿ ಚುನಾವಣೆ ವಿಳಂಬ ಮಾಡುತ್ತಿರುವುದು ಖಂಡನೀಯವಾಗಿದ್ದು, ಶೀಘ್ರ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರು ಹೊರಗುಳಿಯದಂತೆ ಕ್ರಮಕ್ಕೆ ಒತ್ತಾಯ

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಮೀರ್ ಮಾತನಾಡಿ, ಎಸ್‌ಐಆರ್ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲೆಯ ಯಾವುದೇ ಮತದಾರರು ಹೊರಗುಳಿಯದಂತೆ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸೂಕ್ತ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ವಾರ್ಡ್‌ಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ

ಜಿಲ್ಲಾ ಖಜಾಂಚಿ ಅಬ್ದುಲ್ ರಹೀಂ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಿ, ವಿಶೇಷವಾಗಿ ಮಹಿಳೆಯರ ಆರೋಗ್ಯ ಸೇವೆಗಾಗಿ ಗೈನಕಾಲಜಿ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಐಐಟಿ, ಏಮ್ಸ್ ಮಾದರಿಯ ಸಂಸ್ಥೆಗಳಿಗೆ ಬೇಡಿಕೆ

ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಗೌಸ್ ಮಾತನಾಡಿ, ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಲು ಐಐಟಿ ಮತ್ತು ಏಮ್ಸ್ ಮಾದರಿಯ ರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಶಿವಮೊಗ್ಗ ಜಿಲ್ಲೆಗೆ ತರಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್ ಸಹಾಯಕ್ಕಾಗಿ ಬೂತ್ ಮಟ್ಟದ ಸಹಾಯಕರು

ಜಿಲ್ಲಾ ಸಮಿತಿ ಸದಸ್ಯ ಇಸಾಕ್ ಅಹ್ಮದ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಎಸ್‌ಡಿಪಿಐ ವತಿಯಿಂದ ಸಾಧ್ಯವಾದಷ್ಟು ಬೂತ್ ಹಾಗೂ ವಾರ್ಡ್‌ಗಳಲ್ಲಿ ಬೂತ್ ಲೆವೆಲ್ ಅಸಿಸ್ಟೆಂಟ್‌ಗಳನ್ನು (ಬಿಎಲ್‌ಎ) ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಅಂತ್ಯದಲ್ಲಿ ವಿವಿಧ ಸಾರ್ವಜನಿಕ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳ ಗಮನಕ್ಕೆ ತರಲು ನಿರ್ಧರಿಸಲಾಯಿತು.

SDPI District Representatives Meeting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close