SUDDILIVE || NAGARA
ತಲೆಗೆ ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ- Old man commits suicide by shooting himself in the head
ಹೊಸನಗರ ತಾಲೂಕು, ನಗರ ಹೋಬಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಶಿರೂರು ಗ್ರಾಮದಲ್ಲಿ 83 ವರ್ಷದ ವೃದ್ಧರೊಬ್ಬರು ಪರವಾನಗಿ ಹೊಂದಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಬಿ.ಆರ್. ರಾಮಚಂದ್ರ ರಾವ್ ಎಂದು ಗುರುತಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ತಲೆಸುತ್ತಿ ಬಿದ್ದು ಗಾಯಗೊಂಡಿದ್ದರಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು ಎನ್ನಲಾಗಿದೆ.
ಐದು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ರಾಮಚಂದ್ರ ರಾವ್ ಮಾನಸಿಕವಾಗಿ ನೊಂದಿದ್ದು, ಮನೆಯ ಹೊರಗೆ ಹೆಚ್ಚು ಸಂಚರಿಸುತ್ತಿರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರಿಗೆ ಇಬ್ಬರು ಪುತ್ರರಿದ್ದು, ಅವರು ಪುತ್ರ ದಿನೇಶ್ ಅವರೊಂದಿಗೆ ವಾಸವಾಗಿದ್ದರು. ತಡರಾತ್ರಿ ಸುಮಾರು 1.30 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಶಿವಾನಂದ ಕೋಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರ ಹೋಬಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Old man commits suicide by shooting himself in the head

