3 ಕೋಟಿ ರೂ ವೆಚ್ಚದಲ್ಲಿ ವಿದ್ಯಾನಗರ, 70 ಕೊಟಿ ವೆಚ್ಚದಲ್ಲಿ ಬೊಮ್ಮನ್ ಕಟ್ಟೆ ಅಂಡರ್ ಪಾಸ್-ಸಂಸದ ರಾಘವೇಂದ್ರVidyanagar at a cost of Rs 3 crore, Bomman Katte underpass at a cost of Rs 70 crore - MP Raghavendra

 SUDDILIVE || SHIVAMOGGA

3 ಕೋಟಿ ರೂ ವೆಚ್ಚದಲ್ಲಿ ವಿದ್ಯಾನಗರ, 70 ಕೊಟಿ ವೆಚ್ಚದಲ್ಲಿ ಬೊಮ್ಮನ್ ಕಟ್ಟೆ ಅಂಡರ್ ಪಾಸ್-ಸಂಸದ ರಾಘವೇಂದ್ರ-Vidyanagar at a cost of Rs 3 crore, Bomman Katte underpass at a cost of Rs 70 crore - MP 

Raghavendra, underpass

ಶಿವಮೊಗ್ಗ: ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ವಿದ್ಯಾನಗರ ರೈಲ್ವೆ ಗೇಟ್ (ಎಲ್‌ಸಿ ನಂ.46) ಬಳಿ ಹೊಸ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

3 ಕೋಟಿ ರೂ. ವೆಚ್ಚದ ವಿದ್ಯಾನಗರ ಅಂಡರ್ ಪಾಸ್  ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ನಗರವು ಎಲ್ಲಾ ದಿಕ್ಕುಗಳಲ್ಲೂ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಸುಮಾರು ₹46 ಕೋಟಿ ವೆಚ್ಚದಲ್ಲಿ ವಿದ್ಯಾನಗರ ರೈಲ್ವೆ ಗೇಟ್ ಬಳಿ ರಸ್ತೆ ಮೇಲ್ಸೇತುವೆ (ರೋಡ್ ಓವರ್ ಬ್ರಿಡ್ಜ್) ನಿರ್ಮಿಸಲಾಗಿದೆ. ಆದರೆ ವಿದ್ಯಾನಗರ, ಚಿಕ್ಕಲ್, ಶಾಂತಮ್ಮ ಲೇಔಟ್, ಅರ್ಕೇಶ್ವರ ದೇವಸ್ಥಾನ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳಿಗೆ ಆ ಮೇಲ್ಸೇತುವೆ ತಲುಪುವುದು ದೂರವಾಗುತ್ತಿರುವ ಕಾರಣ ಸ್ಥಳೀಯರಿಗೆ ಅನುಕೂಲವಾಗುವಂತೆ ಅಂಡರ್‌ಪಾಸ್ ನಿರ್ಮಿಸುವ ಬಗ್ಗೆ ಶಾಸಕ ಚನ್ನಬಸಪ್ಪ ಹಾಗೂ ಸ್ಥಳೀಯ ಮುಖಂಡರು ಸಲಹೆ ನೀಡಿದ್ದರು ಎಂದು ಹೇಳಿದರು.

ಆ ಸಲಹೆಯಂತೆ ಕೇಂದ್ರ ಸರ್ಕಾರ ಸುಮಾರು ₹3 ರಿಂದ ₹5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ರೈಲ್ವೆ ಇಲಾಖೆಯ ಜಾಗದಲ್ಲಿಯೇ ಅಂಡರ್‌ಪಾಸ್ ನಿರ್ಮಾಣವಾಗುತ್ತಿದೆ. ಸಿಸಿಎಫ್ ಅರಣ್ಯ ಕಚೇರಿ ಕಡೆಯಿಂದ ಹಾಗೂ ಮತ್ತೊಂದು ಬದಿಯಿಂದ ಎರಡು ಅಂಡರ್‌ಪಾಸ್‌ಗಳು ನಿರ್ಮಾಣವಾಗಿ ಒಂದೇ ಜಂಕ್ಷನ್‌ನಲ್ಲಿ ಸೇರಲಿವೆ. ಭವಿಷ್ಯದಲ್ಲಿ ಬೀರೂರು–ಶಿವಮೊಗ್ಗ ರೈಲು ಮಾರ್ಗ ದ್ವಿಪಥ (ಡಬ್ಲಿಂಗ್) ಕಾಮಗಾರಿ ನಡೆದರೂ ಯಾವುದೇ ತೊಂದರೆಯಾಗದಂತೆ ಮುಂದೆ ಅಂಡರ್‌ಪಾಸ್ ವಿಸ್ತರಣೆ ಮಾಡಲು ಅವಕಾಶವಿರುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಈಗಾಗಲೇ ವಿದ್ಯಾನಗರ ಹೊರತುಪಡಿಸಿ ಸವಳಂಗ ಅಂಡರ್‌ಪಾಸ್, ಸೋಮಿನಕೊಪ್ಪ ರಸ್ತೆಯ ಮೇಲ್ಸೇತುವೆ, ದೂರವಾಣಿ ಬಡಾವಣೆ (ಪಿ & ಟಿ ಕಾಲೋನಿ) ಅಂಡರ್‌ಪಾಸ್ ಹಾಗೂ ಭದ್ರಾವತಿ ಕಡದಕಟ್ಟೆ ಸೇತುವೆ ನಿರ್ಮಾಣಗೊಂಡಿವೆ ಎಂದು ಅವರು ಹೇಳಿದರು.

ಇದಲ್ಲದೆ ಕುಮ್ಸಿ ರೈಲ್ವೆ ಕ್ರಾಸಿಂಗ್ ಬಳಿ ಅಂಡರ್‌ಪಾಸ್‌ಗೆ ಅನುಮೋದನೆ ದೊರೆತಿದ್ದು, ಎಡೆಹಳ್ಳಿಯಲ್ಲೂ ಅಂಡರ್‌ಪಾಸ್ ಮಂಜೂರಾಗಿದೆ. ಹೊಸೂರು–ತಾಳಗುಪ್ಪ ಭಾಗದಲ್ಲಿ ಸುಮಾರು ₹120 ಕೋಟಿ ವೆಚ್ಚದಲ್ಲಿ ಎರಡು ಅಂಡರ್‌ಪಾಸ್ ನಿರ್ಮಾಣವಾಗಲಿವೆ ಎಂದು ಮಾಹಿತಿ ನೀಡಿದರು.

ಬೊಮ್ಮನಕಟ್ಟೆ ಭಾಗದಲ್ಲೂ ವಸತಿ ಪ್ರದೇಶ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸಮೀಪದಿಂದ ಬೊಮ್ಮನಕಟ್ಟೆವರೆಗೆ ಸುಮಾರು ₹70 ಕೋಟಿ ವೆಚ್ಚದಲ್ಲಿ, ಭೂಸ್ವಾಧೀನ ಸೇರಿದಂತೆ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಗುಂಡಪ್ಪ ಶೆಟ್ಟಿ ಪ್ರದೇಶದಲ್ಲಿಯೂ ರೈಲ್ವೆ ಇಲಾಖೆಯಿಂದ ಮತ್ತೊಂದು ಅಂಡರ್‌ಪಾಸ್ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.


ಈ ಎಲ್ಲ ಯೋಜನೆಗಳು ಪೂರ್ಣಗೊಂಡ ಬಳಿಕ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಜನರಿಗೆ ಸಂಚಾರದಲ್ಲಿ ಎಲ್ಲಿಯೂ ಬಾಟಲ್‌ನೆಕ್ ಸಮಸ್ಯೆ ಉಂಟಾಗದಂತೆ ಸುಗಮ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ನಿರ್ಮಾಣವಾಗಲಿದೆ ಎಂದು ಸಂಸದ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಅಂಡರ್‌ಪಾಸ್ ಹಾಗೂ ಸಂಬಂಧಿತ ಕಾಮಗಾರಿಗಳಿಗೆ ಸುಮಾರು ₹250 ರಿಂದ ₹300 ಕೋಟಿ ವೆಚ್ಚವಾಗಲಿದ್ದು, ಈ ಅನುದಾನ ಒದಗಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಭೂಮಿ ಒದಗಿಸಿರುವ ರಾಜ್ಯ ಸರ್ಕಾರಕ್ಕೂ ಹಾಗೂ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಬಲ್ಕೀಸ್ ಬಾನು ಅವರಿಗೂ ಅಭಿನಂದನೆ ಸಲ್ಲಿಸಿದರು.

ವಿದ್ಯಾನಗರ ಅಂಡರ್‌ಪಾಸ್ ಕಾಮಗಾರಿಯನ್ನು ಮುಂದಿನ 2 ರಿಂದ 3 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಹಾಗೂ ನೀಲಗಿರಿ ಮರಗಳ ತೆರವು ಪ್ರಕ್ರಿಯೆಯಿಂದ ಸುಮಾರು ಒಂದು ವರ್ಷ ವಿಳಂಬವಾಗಿದ್ದು, ಈಗ ಎಲ್ಲಾ ಅನುಮತಿಗಳು ದೊರೆತಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Vidyanagar at a cost of Rs 3 crore, Bomman Katte underpass at a cost of Rs 70 crore - MP Raghavendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close