SUDDILIVE || SHIVAMOGGA
ಸಂಸದ ರಾಘವೇಂದ್ರರನ್ನು ಹಾಡಿ ಹೊಗಳಿದ ಕಾಂಗ್ರೆಸ್ ಎಂಎಲ್‌ಸಿ ಬಲ್ಕೀಸ್ ಬಾನು- Congress MLC Balkis Banu sings and praises MP Raghavendra
ಶಿವಮೊಗ್ಗ: ವಿದ್ಯಾನಗರದ ಎಲ್‌ಸಿ-46 ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಪರೂಪದ ರಾಜಕೀಯ ಬೆಳವಣಿಗೆಯೊಂದು ಗಮನ ಸೆಳೆದಿದೆ. ಕಾಂಗ್ರೆಸ್ ಎಂಎಲ್‌ಸಿ ಬಲ್ಕೀಸ್ ಬಾನು ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಮಾತನಾಡಿದ ಬಲ್ಕೀಸ್ ಬಾನು, ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಂಸದ ರಾಘವೇಂದ್ರ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಹೇಳಿದರು. "ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ಒಂದು ಕೈ ಮುಂದೆ ಹೋಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ರಾಘವೇಂದ್ರ ಅವರು ನಗರದ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದ್ದಾರೆ. ನಮ್ಮ ಮುಸ್ಲಿಂ ಸಮುದಾಯದಿಂದಲೂ ಮತ ಪಡೆಯುವಷ್ಟು ಜನಪ್ರಿಯತೆ ಗಳಿಸಿರುವುದು ಸಂತಸದ ಸಂಗತಿ" ಎಂದು ಅವರು ಹೇಳಿದರು. ಅವರ ಈ ಹೇಳಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾನಗರದ ಎಲ್‌ಸಿ-46 ಅಂಡರ್‌ಪಾಸ್ ಕಾಮಗಾರಿಯ ಜೊತೆಗೆ ಸುಮಾರು ₹3 ಕೋಟಿ ವೆಚ್ಚದಲ್ಲಿ ಎರಡು ಓವರ್‌ಬ್ರಿಡ್ಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಬೊಮ್ಮನಕಟ್ಟೆ ಅಂಡರ್‌ಪಾಸ್ ನಿರ್ಮಾಣಕ್ಕೂ ಸುಮಾರು ₹70 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟಾರೆ ₹250ರಿಂದ ₹300 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ಗಳನ್ನ ನಿರ್ಮಿಸಲಾಗುತ್ತಿದೆ ಹಾಗೂ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ನಗರದಲ್ಲಿನ ಸಂಚಾರ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್. ಅರುಣ್, ಪಾಲಿಕೆಯ ಮಾಜಿ ಸದಸ್ಯ ಮೋಹನ್ ರೆಡ್ಡಿ, ಯಮುನಾ ರಂಗೇಗೌಡ, ಜ್ಞಾನೇಶ್ವರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾಂಗ್ರೆಸ್ ಎಂಎಲ್‌ಸಿ ಬಲ್ಕೀಸ್ ಬಾನು ಅವರು ಬಿಜೆಪಿ ಸಂಸದ ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಬಹಿರಂಗವಾಗಿ ಶ್ಲಾಘಿಸಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು.
