SUDDILIVE || SHIVAMOGGA
ಶಾಲೆಯಲ್ಲೇ ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಹಲ್ಲೆ ಆರೋಪ; ಮುಖ್ಯ ಶಿಕ್ಷಕಿ ಸೇರಿ ನಾಲ್ವರ ವಿರುದ್ಧ ದೂರು- SDMC president accused of assault at school; complaint filed against four people including Head teacher
ಆನಂದಪುರಂ, ಜೂ.24: ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಶಾಲೆಯ ಆವರಣದಲ್ಲೇ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮುಖ್ಯ ಶಿಕ್ಷಕಿ ಸೇರಿದಂತೆ ನಾಲ್ವರ ವಿರುದ್ಧ ಆನಂದಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಉಮ್ಮರ್ ಬಿನ್ ಸೈಯದ್ ವಾಜೀದ್ ಅವರು ನೀಡಿರುವ ದೂರಿನ ಪ್ರಕಾರ, ಕಳೆದ ಒಂದು ವರ್ಷಗಳಿಂದ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನಿಗಳ ಸಹಕಾರದಿಂದ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಶಾಲೆಯ ಹಣಕಾಸು ವ್ಯವಹಾರಗಳ ಲೆಕ್ಕಪತ್ರ ಮತ್ತು ಎಸ್‌ಡಿಎಂಸಿ ನಿರ್ಣಯಗಳ ಪುಸ್ತಕವನ್ನು ಮುಖ್ಯ ಶಿಕ್ಷಕಿ ನಾಜಿಮಾ ಅವರು ಸಮಿತಿಯ ಮುಂದೆ ಹಾಜರುಪಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜೂನ್ 22ರಂದು ಕೆಲ ದಾನಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಶಾಲೆಗೆ ಭೇಟಿ ನೀಡಿದ್ದ ವೇಳೆ ಲೆಕ್ಕಪತ್ರ ಮತ್ತು ರೆಸಲ್ಯೂಷನ್ ಪುಸ್ತಕವನ್ನು ನೀಡುವಂತೆ ಕೇಳಿದ್ದರಿಂದ ಮುಖ್ಯ ಶಿಕ್ಷಕಿ ನಾಜಿಮಾ ಅವರು ಆಕ್ರೋಶಗೊಂಡು ತಮ್ಮ ಪುತ್ರ ಹಾಗೂ ಆತನ ಸ್ನೇಹಿತರನ್ನು ಶಾಲೆಗೆ ಕರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎದೆ, ಹೊಟ್ಟೆ ಮತ್ತು ಮೂಗಿನ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೂಗಿನಿಂದ ರಕ್ತಸ್ರಾವವಾಗಿ ತಾನು ಕುಸಿದು ಬಿದ್ದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಶಿರಿಜಾನ್ ಹಾಗೂ ಇಮ್ತಿಯಾಜ್ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ವೇಳೆ ಶಾಲೆಯ ಮತ್ತೋರ್ವ ಶಿಕ್ಷಕ ಜಗಳ ತಡೆಯುವ ಬದಲು ಹಲ್ಲೆ ನಡೆಸಲು ಪ್ರಚೋದನೆ ನೀಡಿದರು ಎಂಬ ಆರೋಪವೂ ದೂರಿನಲ್ಲಿ ಮಾಡಲಾಗಿದೆ. ಗಾಯಗೊಂಡ ಸೈಯದ್ ಉಮ್ಮರ್ ಅವರನ್ನು ಮೊದಲು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತನಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೈಯದ್ ಉಮ್ಮರ್ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಸ್ ಎಂಸಿ ಅಧ್ಯಕ್ಷರು ಗೂಂಡರೀತಿ ವರ್ತಿಸುತ್ತಿರುವ ಮುಖ್ಯ ಶಿಕ್ಷಕಿಯನ್ನ ಸೇವೆಯಿಂದ ಅಮಾನತ್ತು ಪಡಿಸುವಂತೆ ಆಗ್ರಹಿಸಿದ್ದಾರೆ.
