SUDDIIVE || SHIKARIPURA
ಕಳವು ಪ್ರಕರಣ ಭೇದಿಸಿದ ಶಿಕಾರಿಪುರ ಪೊಲೀಸರು- Shikaripura police crack theft case
ಪಟ್ಟಣದ ಅರಸುನಗರ 2ನೇ ಕ್ರಾಸ್ ನಿವಾಸಿ ಗೌರಮ್ಮ ಅವರ ಮನೆಯಲ್ಲಿ ನಡೆದ ಕಳವು ಪ್ರಕರಣವನ್ನು ಶಿಕಾರಿಪುರ ಪಟ್ಟಣ ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ಸಂಪೂರ್ಣ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಗೌರಮ್ಮ ಅವರು ಜೂನ್ 5ರಂದು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ, ಜೂನ್ 4ರಂದು ಬೆಳಿಗ್ಗೆ 8.30ರಿಂದ ಸಂಜೆ 5.45ರ ಅವಧಿಯಲ್ಲಿ ಯಾರೋ ಕಳ್ಳರು ತಮ್ಮ ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ 28 ಗ್ರಾಂ ತೂಕದ ₹3.14 ಲಕ್ಷ ಮೌಲ್ಯದ ಚಿನ್ನಾಭರಣಗಳು, 134 ಗ್ರಾಂ ತೂಕದ ₹26,800 ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ ₹2 ಲಕ್ಷ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದರು.
ದೂರಿನ ಮೇರೆಗೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 90/2026 ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ವಿಶೇಷ ತಂಡ ರಚನೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ಹಾಗೂ ಶಿಕಾರಿಪುರ ಉಪವಿಭಾಗದ ಡಿವೈಎಸ್ಪಿ ಕೇಶವ ಕೆ.ಇ ಅವರ ಮೇಲ್ವಿಚಾರಣೆಯಲ್ಲಿ, ಸಿಪಿಐ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಶರತ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆರೋಪಿ ಬಂಧನ
ತನಿಖೆ ವೇಳೆ ಶಿಕಾರಿಪುರ ಪಟ್ಟಣದ ಸೊಪ್ಪಿನಕೇರಿ–ಮಾಸೂರು ರಸ್ತೆಯ ನಿವಾಸಿ ಅಮಿತ್ (47) ಎಂಬಾತನನ್ನು ಬಂಧಿಸಿದ ಪೊಲೀಸರು, ಆತನಿಂದ ಕಳವು ಮಾಡಿದ್ದ ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು ಹಾಗೂ ₹2 ಲಕ್ಷ ನಗದು ಸೇರಿದಂತೆ ಒಟ್ಟು ₹5.41 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಶೀಘ್ರ ಭೇದಿಸಿ ಕಳುವಾದ ಸಂಪೂರ್ಣ ಮಾಲನ್ನು ಪತ್ತೆಹಚ್ಚಿದ ತನಿಖಾ ತಂಡದ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

