SUDDILIVE || SHIVAMOGGA
ಟಿಪ್ಪು ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸಾವು-Young man died in Tippunagra road accident
ಶಿವಮೊಗ್ಗ, ಜೂನ್ 20: ಟಿಪ್ಪುನಗರದಲ್ಲಿ ಜೂ.13 ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಪ್ರಕರಣದಲ್ಲಿ ಅಪಘಾತ ಪಡಿಸಿದವನೆ ಸಾವನ್ನಪ್ಪಿದ್ದು ಆತನನ್ನ ರಸೂಲ್ ಸಯ್ಯದ್(27) ಎಂದು ಗುರುತಿಸಲಾಗಿದೆ.
ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿರುವ ಘಟನೆ ಶಿವಮೊಗ್ಗ ನಗರದ ಟಿಪ್ಪುನಗರ ಮುಖ್ಯರಸ್ತೆಯ 6ನೇ ಕ್ರಾಸ್ ಸಮೀಪ ಜೂನ್ 13ರಂದು ರಾತ್ರಿ ನಡೆದಿತ್ತು. ಈ ಸಂಬಂಧ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪುನಗರದ ನಿವಾಸಿ ಪರ್ವೇಜ್ ಅಹ್ಮದ್ ಅವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಎದುರು ದಿಕ್ಕಿನಿಂದ ಬಂದ ಬೈಕ್ ಸವಾರ ರಸೂಲ್ ಸಯ್ಯದ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಸೂಲ್ ಸಯ್ಯದ್ ಈ ಪ್ರಕರಣದ ಆರೋಪಿ ಆಗಿದ್ದಾನೆ.
ಅಪಘಾತದ ಪರಿಣಾಮ ಪರ್ವೇಜ್ ಅಹ್ಮದ್, ಅವರ ಪತ್ನಿ ಹಾಗೂ ಮಗಳಿಗೆ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಹಾಗೂ ಸರ್ಜಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ದೂರಿನ ಆಧಾರದ ಮೇಲೆ ರಸೂಲ್ ಸಯ್ಯದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 125(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಸೂಲ್ ಕೊನೆ ಉಸಿರು ಎಳೆದಿದ್ದಾರೆ.
