ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರ ಸ್ವಚ್ಛತಾ ಕಾರ್ಯ: ಫುಟ್‌ಪಾತ್ ತೆರವು, ವಾಹನ ಸಂಚಾರಕ್ಕೆ ಮುಕ್ತ ದಾರಿ- Traffic police clean-up operation in Shivamogga: Footpath cleared, road open for vehicular traffic

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರ ಸ್ವಚ್ಛತಾ ಕಾರ್ಯ: ಫುಟ್‌ಪಾತ್ ತೆರವು, ವಾಹನ ಸಂಚಾರಕ್ಕೆ ಮುಕ್ತ ದಾರಿ-  Traffic police clean-up operation in Shivamogga: Footpath cleared, road open for vehicular traffic   

Traffic, police

Traffic, police

ಶಿವಮೊಗ್ಗ, ಜೂನ್ 20: ನಗರದ ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿಶೇಷ ಸ್ವಚ್ಛತಾ ಕಾರ್ಯಾಚರಣೆ ನಡೆಸಿದರು.

ನಗರದ ಓಟಿ ರಸ್ತೆ, ಗೌರವ್ ಲಾಡ್ಜ್ ಸಮೀಪದ ಆಟೋ ನಿಲ್ದಾಣ ಹಾಗೂ ಬಿಹೆಚ್ ರಸ್ತೆ ಭಾಗಗಳಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಹಲವು ದಿನಗಳಿಂದ ಈ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳ ಮೇಲೆ ಆಟೋ ನಿಲ್ದಾಣಗಳು, ತಳ್ಳುವ ಗಾಡಿಗಳು ಹಾಗೂ ಸಣ್ಣ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿದ್ದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ರಸ್ತೆಯ ಅಂಚಿನಲ್ಲಿ ಅನಿಯಮಿತವಾಗಿ ವಾಹನಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅತಿಕ್ರಮಣ ತೆರವುಗೊಳಿಸಿದರು. ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಜೊತೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಆಟೋಗಳು ಮತ್ತು ಇತರೆ ವಸ್ತುಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯ ನಂತರ ರಸ್ತೆಯಲ್ಲಿ ವಾಹನಗಳ ಓಡಾಟ ಸುಗಮಗೊಂಡಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಕುರಿತು ಸುದ್ದಿಲೈವ್ ಜೊತೆ ಮಾತನಾಡಿದ ಸಿಪಿಐ ದೇವರಾಜ್, “ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಆಟೋ ನಿಲ್ದಾಣ ಹಾಗೂ ತಳ್ಳುವ ಗಾಡಿಗಳ ವ್ಯಾಪಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸಾರ್ವಜನಿಕರ ಅನುಕೂಲ ಮತ್ತು ಸಂಚಾರ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಇದೇ ವೇಳೆ ರಾಯಲ್ ಆರ್ಕೆಡ್ ಹೋಟೆಲ್ ಮುಂಭಾಗದಲ್ಲಿದ್ದ ಲಗೇಜ್ ಆಟೋಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆ ಸ್ಥಳದಲ್ಲಿ ಪ್ರಯಾಣಿಕರ ಆಟೋಗಳು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳಿಗೆ ವ್ಯವಸ್ಥಿತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ನಗರದ ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣ ತೆರವು ಕಾರ್ಯ ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಈ ಕ್ರಮದಿಂದ ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Traffic police clean-up operation in Shivamogga: Footpath cleared, road open for vehicular traffic   

   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close