ಶಿವಮೊಗ್ಗದಲ್ಲಿ ಶೇ.44ರಷ್ಟು ಮಳೆ ಕೊರತೆ; ಬಿತ್ತನೆ ಕೇವಲ 28%-ಡಿಸಿ ಪ್ರಭುಲಿಂಗ ಕವಳಿಕಟ್ಟಿ- 44% rainfall deficit in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಶೇ.44ರಷ್ಟು ಮಳೆ ಕೊರತೆ; ಬಿತ್ತನೆ ಕೇವಲ 28%-ಡಿಸಿ ಪ್ರಭುಲಿಂಗ ಕವಳಿಕಟ್ಟಿ- 44% rainfall deficit in Shivamogga; sowing only 28%-DC Prabhulinga Kavalikatti   
Rain, deficit

ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಸಾಮಾನ್ಯ ಪ್ರಮಾಣಕ್ಕಿಂತ ಶೇ.44ರಷ್ಟು ಮಳೆ ಕೊರತೆ (Rain Deficit) ದಾಖಲಾಗಿದ್ದು, ಇದರ ಪರಿಣಾಮವಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆ, ಬೆಳೆ ಪರಿಸ್ಥಿತಿ, ರಸಗೊಬ್ಬರ ವಿತರಣೆ, ಬೆಳೆ ವಿಮೆ, ಪರಿಹಾರ, ಕುಡಿಯುವ ನೀರು ಹಾಗೂ ಪರೀಕ್ಷೆಗಳ ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ವಿವರಿಸಿದರು.

ಶೇ.44ರಷ್ಟು ಮಳೆ ಕೊರತೆ, ಬಿತ್ತನೆ ಕೇವಲ ಶೇ.28

ಜಿಲ್ಲೆಯಲ್ಲಿ ಇದುವರೆಗೆ ಸಾಮಾನ್ಯಕ್ಕಿಂತ ಶೇ.44ರಷ್ಟು ಮಳೆ ಕಡಿಮೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ವಿಭಾಗದ ಜಿಲ್ಲಾಧಿಕಾರಿಗಳು, ಸಿಇಒಗಳು, ಎಸ್‌ಪಿಗಳು, ಡಿಎಫ್‌ಒಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಡಿಸಿ ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ ಕೃಷಿ ಬಿತ್ತನೆ ಕೇವಲ ಶೇ.28ರಷ್ಟು ಮಾತ್ರ ಪೂರ್ಣಗೊಂಡಿದೆ. ಪ್ರಮುಖ ಬೆಳೆಗಳಾದ ಭತ್ತ ಮತ್ತು ಮೆಕ್ಕೆಜೋಳ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದರು.

ಭತ್ತದ ನಾಟಿ ವಿಳಂಬ, ಮೆಕ್ಕೆಜೋಳ ಬೆಳವಣಿಗೆ ಕುಂಠಿತ

ಸಾಕಷ್ಟು ನೀರು ದೊರೆಯುವುದಿಲ್ಲ ಎಂಬ ಆತಂಕದಿಂದ ರೈತರು ಭತ್ತದ ನಾಟಿಯನ್ನು ಮುಂದೂಡಿದ್ದಾರೆ. ಆದರೆ ಆಗಸ್ಟ್ ಅಂತ್ಯದವರೆಗೂ ನಾಟಿಗೆ ಅವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಭತ್ತದ ಬಿತ್ತನೆ ಹೆಚ್ಚುವ ನಿರೀಕ್ಷೆ ಇದೆ ಎಂದು ಹೇಳಿದರು.

ಮತ್ತೊಂದೆಡೆ, ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೂ ಸಮರ್ಪಕ ಮಳೆಯ ಕೊರತೆಯಿಂದ ಬೆಳವಣಿಗೆ ಕುಂಠಿತವಾಗಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಆರೋಗ್ಯಕರ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ಶಿಕಾರಿಪುರ, ಸೊರಬ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಸ್ವತಃ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಲೇ ಬೆಳೆ ನಷ್ಟದ ಅಂದಾಜು ಸಾಧ್ಯವಿಲ್ಲ

ಬೆಳೆ ಹಾನಿಯ ಬಗ್ಗೆ ಈಗಲೇ ಅಂತಿಮ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು, ಮೊದಲು ಎಷ್ಟು ಪ್ರದೇಶದಲ್ಲಿ ಬಿತ್ತನೆ ನಡೆದಿದೆ, ಎಷ್ಟು ಪ್ರದೇಶ ಬಿತ್ತನೆ ಆಗಿಲ್ಲ ಎಂಬ ಮಾಹಿತಿ ಸಂಗ್ರಹಿಸಬೇಕಿದೆ ಎಂದರು.

ಬರ ಘೋಷಣೆಗೆ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ನಿರಂತರ ಮೂರು ವಾರ ಮಳೆಯಿಲ್ಲದ ಡ್ರೈ ಸ್ಪೆಲ್ ಇರಬೇಕು. ಶಿವಮೊಗ್ಗದಲ್ಲಿ ಮಳೆ ಕಡಿಮೆ ಇದ್ದರೂ ಮಧ್ಯೆ ಮಧ್ಯೆ ಮಳೆಯಾಗುತ್ತಿರುವುದರಿಂದ ಪ್ರಸ್ತುತ ಜಿಲ್ಲೆಯು ಆ ಮಾನದಂಡಕ್ಕೆ ಒಳಪಡುವುದಿಲ್ಲ ಎಂದು ವಿವರಿಸಿದರು.

ರೈತರಿಗೆ ಯೂರಿಯಾ ವಿತರಣೆಯಲ್ಲಿ ತೊಂದರೆ; ಕ್ರಮದ ಭರವಸೆ

ಒಂದು ಎಕರೆಗೆ ಒಂದು ಚೀಲ ಯೂರಿಯಾ ಮಾತ್ರ ವಿತರಿಸುತ್ತಿರುವುದರಿಂದ ರೈತರು ಹೆಚ್ಚುವರಿ ದರ ನೀಡಿ ಗೊಬ್ಬರ ಖರೀದಿಸಬೇಕಾಗಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ, ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಅಗತ್ಯವಿರುವ ಪ್ರದೇಶಗಳಿಗೆ ಗೊಬ್ಬರ ಮರುಹಂಚಿಕೆ (Re-mapping) ಮಾಡುವ ಮೂಲಕ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಿತ್ತನೆ ಮಾಡದ ರೈತರ ಕೋಟಾವನ್ನು ಅಗತ್ಯವಿರುವ ರೈತರಿಗೆ ಹೊಂದಾಣಿಕೆ ಮಾಡುವ ಕುರಿತು ರಾಜ್ಯ ಮಟ್ಟದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಳೆ ವಿಮೆಗೆ ಮಳೆಮಾಪನ ಕೇಂದ್ರಗಳ ದುರಸ್ತಿ

ಬೆಳೆ ವಿಮೆ ಪರಿಹಾರದಲ್ಲಿ ಮಳೆಮಾಪನ ಕೇಂದ್ರಗಳ ದೋಷ ದೊಡ್ಡ ಸಮಸ್ಯೆಯಾಗಿತ್ತು ಎಂದು ಒಪ್ಪಿಕೊಂಡ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿರುವ 180 ಮಳೆಮಾಪನ ಕೇಂದ್ರಗಳ ಪೈಕಿ 185 ಕೇಂದ್ರಗಳನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಉಳಿದ ಕೇಂದ್ರಗಳನ್ನೂ ಮುಂದಿನ 15 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದು, ಹಿಂದಿನ ವರ್ಷಗಳ ತಪ್ಪು ದಾಖಲೆಗಳಿಂದ ವಿಮೆ ವಂಚಿತರಾದ ರೈತರಿಗೆ ಪರಿಹಾರ ಕಲ್ಪಿಸುವ ಕುರಿತು ವಿಮಾ ಕಂಪನಿಗಳೊಂದಿಗೆ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದರು.

ಅಡಿಕೆ ಬೆಳೆ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಬೇಡಿಕೆ

ಬೇಸಿಗೆ ಮಳೆಯಲ್ಲಿ ಅಡಿಕೆ ಬೆಳೆ ಹಾನಿಗೆ ನೀಡಲಾಗುತ್ತಿರುವ ಪರಿಹಾರ ಕಡಿಮೆ ಎಂಬ ರೈತರ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಡಿಸಿ, 33 ಶೇಕಡಕ್ಕಿಂತ ಹೆಚ್ಚು ಹಾನಿಯಾದಲ್ಲಿ ಎಸ್‌ಡಿಆರ್‌ಎಫ್ ನಿಯಮದಂತೆ ಪ್ರತಿ ಹೆಕ್ಟೇರ್‌ಗೆ ₹22,500 ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆದರೆ ಈ ಮೊತ್ತ ಸಾಕಾಗುತ್ತಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳು ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತವೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದರೆ ಹೆಚ್ಚುವರಿ ಪರಿಹಾರ ದೊರೆಯಲಿದೆ ಎಂದರು.

ಬೆಳೆ ಹಾಗೂ ಮನೆ ಹಾನಿ ಪರಿಹಾರ

ಏಪ್ರಿಲ್ ತಿಂಗಳ ಬೆಳೆ ಹಾನಿಗೆ ಸಂಬಂಧಿಸಿದ ಮಾಹಿತಿಯನ್ನು ಈಗಾಗಲೇ ಡಿಬಿಟಿ ವ್ಯವಸ್ಥೆಗೆ ಕಳುಹಿಸಲಾಗಿದೆ. ಅನುಮೋದನೆಯಾದ ಬಳಿಕ ಒಂದು ವಾರದೊಳಗೆ ಪರಿಹಾರ ಜಮೆಯಾಗುವ ನಿರೀಕ್ಷೆಯಿದೆ. ಮೇ ತಿಂಗಳ ಹಾನಿಗೆ ಸಂಬಂಧಿಸಿದಂತೆ ಪೋರ್ಟಲ್ ತೆರೆಯುತ್ತಿದ್ದಂತೆಯೇ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುವುದು ಎಂದು ಹೇಳಿದರು.

ಮನೆ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ನೀಡುವ ನಿಯಮವಿದ್ದು, ಜಿಲ್ಲಾಡಳಿತ ಅದನ್ನು ಪಾಲಿಸುತ್ತಿದೆ ಎಂದರು.

37 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಮಳೆ ಕೊರತೆಯಿಂದ ಜಿಲ್ಲೆಯ 37 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ.

ತೀರ್ಥಹಳ್ಳಿ ಭಾಗದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮ

ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಜಿಲ್ಲಾಧಿಕಾರಿಗಳ ಮೇಲಿದೆ ಎಂಬ ಸರ್ಕಾರದ ಸೂಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ನಡೆದ ನೀಟ್ ಸೇರಿದಂತೆ ಯಾವುದೇ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಎಂದರು.

ಇನ್ನು ಮುಂದೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಜ್ಯಾಮರ್, ಕಟ್ಟುನಿಟ್ಟಿನ ಉಡುಪು ನಿಯಮ ಹಾಗೂ ಸುಧಾರಿತ ಲಾಜಿಸ್ಟಿಕ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಪ್ರತಿಯೊಂದು ಪ್ರಶ್ನೆಪತ್ರಿಕೆಯ ಮೂಲವನ್ನು ಪತ್ತೆಹಚ್ಚುವ ವ್ಯವಸ್ಥೆಯೂ ರೂಪಿಸಲಾಗಿದೆ ಎಂದು ಹೇಳಿದರು.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಸೇರಿದಂತೆ ಮುಂದಿನ ಎಲ್ಲ ಪರೀಕ್ಷೆಗಳಿಗೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಂಪೂರ್ಣ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂದು ತಿಳಿಸಿದರು.

44% rainfall deficit in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close