SUDDILIVE || SHIVAMOGGA
60 ರಿಂದ 70 ಸಾವಿರ ಎನ್ಯೂಮರೇಷನ್ ಫಾರಂಗಳು ಸ್ವೀಕೃತವಾಗುವುದು ಬಾಕಿಇದೆ-ಡಿಸಿ-60 to 70 thousand enumeration forms are pending receipt - DC
ಶಿವಮೊಗ್ಗ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision) ಪ್ರಕ್ರಿಯೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಪತ್ತೆಯಾಗದ ಮತದಾರರ ಬಗ್ಗೆ ಜಿಲ್ಲಾಡಳಿತ ಮಹತ್ವದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ನಿಖರಗೊಳಿಸುವ ಉದ್ದೇಶದಿಂದ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ 43,845 ಮಂದಿ ಮೃತಪಟ್ಟಿರುವುದು, 72,544 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 23,738 ಮಂದಿ ಪತ್ತೆಯಾಗದ ಅಥವಾ ಗೈರುಹಾಜರಾಗಿರುವುದು, 15,329 ಮಂದಿ ಈಗಾಗಲೇ ಬೇರೆ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವುದು ಹಾಗೂ 558 ಪ್ರಕರಣಗಳನ್ನು 'ಇತರೆ' ವಿಭಾಗದಲ್ಲಿ ವರ್ಗೀಕರಿಸಲಾಗಿದೆ ಎಂದು ಅವರು ವಿವರಿಸಿದರು.
"ಇತರೆ" ವಿಭಾಗದಲ್ಲಿ ಏನಿದೆ?
"ಇತರೆ" ವಿಭಾಗದ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು, ಕೆಲವರು ಮನೆಗೆ ತೆರಳಿದ ಬಿಎಲ್‌ಒಗಳಿಗೆ (BLO) "ನಾವು ಫಾರಂ ಕೊಡುವುದಿಲ್ಲ" ಎಂದು ನಿರಾಕರಿಸುವ ಪ್ರಕರಣಗಳು ಇದರಲ್ಲಿ ಸೇರಿವೆ. ಇಂತಹ ಮತದಾರರನ್ನು ಅಧಿಕಾರಿಗಳು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಮತದಾನ ಬಹಿಷ್ಕಾರದಂತಹ ಸಂದರ್ಭಗಳಲ್ಲಿಯೂ ಮತದಾರರನ್ನು ಮನವೊಲಿಸಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಮನೆ ಬದಲಾವಣೆ, ಮೃತರ ಮಾಹಿತಿ ಪರಿಶೀಲನೆಗೆ ಆದ್ಯತೆ
ಸ್ಥಳಾಂತರಗೊಂಡಿರುವ (Shifted) ಹಾಗೂ ಮೃತಪಟ್ಟಿರುವ (Death) ಮತದಾರರ ಮಾಹಿತಿಯನ್ನು ಬಿಎಲ್‌ಒಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಮನೆ ಬದಲಾವಣೆ ಮತ್ತು ಮೃತರ ಮಾಹಿತಿ ಖಚಿತಪಡಿಸಿಕೊಂಡ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆಗಸ್ಟ್ 8ರವರೆಗೆ ಅವಕಾಶ
ಇನ್ನೂ ಸುಮಾರು 60 ರಿಂದ 70 ಸಾವಿರ ಎನ್ಯೂಮರೇಷನ್ ಫಾರಂಗಳು ಬಾಕಿ ಇರುವುದಾಗಿ ತಿಳಿಸಿದ ಅವರು, ಮತದಾರರು ಕೊನೆಯ ಕ್ಷಣದವರೆಗೆ ಕಾಯದೆ ಆಗಸ್ಟ್ 8ರೊಳಗೆ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಿದವರಿಗೆ ಮತ್ತೆ ಫಾರಂ ಬೇಡ
ಈಗಾಗಲೇ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಸಿರುವ ಮತದಾರರು ಮತ್ತೆ ಮ್ಯಾನುಯಲ್ ಫಾರಂ ಸಲ್ಲಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಆನ್‌ಲೈನ್‌ನಲ್ಲಿ ಸಲ್ಲಿಸಿದ ಮಾಹಿತಿ ನೇರವಾಗಿ ಡಿಜಿಟಲ್ ವ್ಯವಸ್ಥೆಗೆ ಸೇರುತ್ತದೆ ಎಂದರು.
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ (Draft Electoral Roll) ಪ್ರಕಟವಾಗಲಿದ್ದು, ಆ ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಸಂಬಂಧಿಸಿದ ಚುನಾವಣಾ ನೋಂದಣಿ ಅಧಿಕಾರಿ (ERO)ಗೆ ಮಾಹಿತಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಅನುಮಾನಾಸ್ಪದ ಪ್ರಕರಣಗಳಿಗೆ ನೋಟಿಸ್
2002ರ ಮತದಾರರ ದಾಖಲೆ, ಹೆಸರು, ಆರಂಭದ ಅಕ್ಷರ (Initial), ಧರ್ಮ ಬದಲಾವಣೆ ಅಥವಾ ಇತರೆ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಿ ದಾಖಲೆ ಪರಿಶೀಲನೆ ನಡೆಸಲಾಗುವುದು. ದಾಖಲೆಗಳು ಸರಿಹೊಂದಿದರೆ ಮತದಾರರ ಹೆಸರು ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಬಿಎಲ್‌ಒಗಳ ಮೂಲಕವೇ ಹೆಚ್ಚು ಸ್ಪಂದನೆ
ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (BLA) ಕೂಡ ಫಾರಂಗಳನ್ನು ಸಂಗ್ರಹಿಸಿ ಸಲ್ಲಿಸಬಹುದಾದರೂ, ಸಾರ್ವಜನಿಕರು ಹೆಚ್ಚಾಗಿ ಬಿಎಲ್‌ಒಗಳ ಮೇಲೆಯೇ ವಿಶ್ವಾಸ ಇಟ್ಟು ನೇರವಾಗಿ ಅವರ ಮೂಲಕವೇ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಬಿಎಲ್‌ಎಗಳ ಮೂಲಕ ಸಲ್ಲಿಕೆಗೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣ ಪಾರದರ್ಶಕ ಹಾಗೂ ದೋಷರಹಿತವಾಗಿಸಲು ಪರಿಶೀಲನಾ ಪ್ರಕ್ರಿಯೆ ಮುಂದುವರಿದಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮನವಿ ಮಾಡಿದರು.
60 to 70 thousand enumeration forms are pending receipt - DC

