ಒಂದೇ ದಿನ ಎರಡು ಕುಟುಂಬಗಳ 8 ಮಂದಿ ಅಸ್ವಸ್ಥರು-ಆಸ್ಪತ್ರೆಗೆ ದಾಖಲು- 8 people from two families fall ill and are admitted to hospital on the same day

SUDDILIVE || BHADRAVATHI

ಒಂದೇ ದಿನ ಎರಡು ಕುಟುಂಬಗಳ 8 ಮಂದಿ ಅಸ್ವಸ್ಥರು-ಆಸ್ಪತ್ರೆಗೆ ದಾಖಲು-  8 people from two families fall ill and are admitted to hospital on the same day  


ಭದ್ರಾವತಿ: ಕಾಡಿನಲ್ಲಿ ಸಿಕ್ಕ ಕಾಡು ಅಣಬೆ (ಮಶ್ರೂಮ್)ಗಳನ್ನು ಸಂಗ್ರಹಿಸಿ ಮನೆಯಲ್ಲೇ ಅಡುಗೆ ಮಾಡಿ ಸೇವಿಸಿದ್ದ ಪರಿಣಾಮ ಒಂದೇ ದಿನ ಎರಡು ಪ್ರತ್ಯೇಕ ಕುಟುಂಬಗಳ ಒಟ್ಟು 8 ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿರುವ ಘಟನೆ ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಕಾಡಿನ ಅಣಬೆಗಳನ್ನು ಗುರುತಿಸದೇ ಸೇವಿಸದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುವ ಅಗತ್ಯ ಎದುರಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಹೊನ್ನಾಟ್ಟಿ ಹೊಸೂರು ಗ್ರಾಮದ ಒಂದೇ ಕುಟುಂಬದ ಮೂವರು ಹಾಗೂ ಸಮೀಪದ ಹಿರಿಯೂರು ಗ್ರಾಮದ ಮತ್ತೊಂದು ಕುಟುಂಬದ ಐವರು ಅಸ್ವಸ್ಥರಾಗಿದ್ದಾರೆ. ಎಲ್ಲರೂ ಕಾಡಿನಲ್ಲಿ ದೊರೆತ ಅಣಬೆಗಳನ್ನು ಮನೆಗೆ ತಂದು ಸಾಮಾನ್ಯವಾಗಿ ಅಡುಗೆ ಮಾಡಿಕೊಂಡು ಸೇವಿಸಿದ ಕೆಲವೇ ಗಂಟೆಗಳಲ್ಲಿ ವಾಂತಿ, ಭೇದಿ ಹಾಗೂ ತೀವ್ರ ಸುಸ್ತಿನ ಲಕ್ಷಣಗಳು ಕಾಣಿಸಿಕೊಂಡಿವೆ.

ಹೊನ್ನಾಟ್ಟಿ ಹೊಸೂರಿನಲ್ಲಿ ತಂದೆ-ಇಬ್ಬರು ಮಕ್ಕಳು ಅಸ್ವಸ್ಥ

ಹೊನ್ನಾಟ್ಟಿ ಹೊಸೂರು ಗ್ರಾಮದ ಬಸವರಾಜ್ (44), ಮಕ್ಕಳುಗಳಾದ (14) ಹಾಗೂ 7 ವರ್ಷದ ಇಬ್ಬರು ಮಕ್ಕಳು  ಅಣಬೆ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಕುಟುಂಬದ ನಾಲ್ವರಲ್ಲಿ ಮನೆಯ ಮಹಿಳೆ ಅಣಬೆ ಸೇವಿಸದ ಕಾರಣ ಅವರಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ಅಸ್ವಸ್ಥರನ್ನು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೊರರೋಗಿ (OPD) ಆಧಾರದಲ್ಲಿ ಚಿಕಿತ್ಸೆ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಹಿರಿಯೂರಿನಲ್ಲಿ ಐವರು ಆಸ್ಪತ್ರೆಗೆ

ಇದೇ ವೇಳೆ ಸಮೀಪದ ಹಿರಿಯೂರು ಗ್ರಾಮದ ಮತ್ತೊಂದು ಕುಟುಂಬದ ಐವರು ಸಹ ಇದೇ ರೀತಿಯ ಅಣಬೆ ಸೇವಿಸಿದ ನಂತರ ವಾಂತಿ, ಭೇದಿ ಹಾಗೂ ಸುಸ್ತಿನ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗದೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇವರಲ್ಲಿ ಹರೀಶ್ ಬಾಬು, ಕವಿತಾಬಾಯಿ ಸೇರಿದಂತೆ ಕುಟುಂಬದ ಸದಸ್ಯರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಣಬೆ ಸೇವಿಸಿದ ಕೆಲವೇ ಗಂಟೆಗಳಲ್ಲಿ ಲಕ್ಷಣ

ಎರಡೂ ಕುಟುಂಬಗಳು ಕಾಡಿನಲ್ಲಿ ಸಿಕ್ಕ ಅಣಬೆಗಳನ್ನು ಮನೆಗೆ ತಂದು ರಾತ್ರಿ ಅಡುಗೆ ಮಾಡಿಕೊಂಡು ಸೇವಿಸಿದ್ದು, ಬಳಿಕ ಕೆಲವೇ ಗಂಟೆಗಳಲ್ಲಿ ವಾಂತಿ, ಭೇದಿ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ. ಎಲ್ಲರಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡುಬಂದಿರುವುದು ಗಮನಾರ್ಹವಾಗಿದೆ.

ವೈದ್ಯರ ನಿಗಾ

ಪ್ರಸ್ತುತ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ಅಗತ್ಯ ಔಷಧೋಪಚಾರ ನೀಡಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ

ಮಳೆಗಾಲದಲ್ಲಿ ಕಾಡಿನಲ್ಲಿ ವಿವಿಧ ಜಾತಿಯ ಅಣಬೆಗಳು ಬೆಳೆಯುತ್ತವೆ. ಅವುಗಳಲ್ಲಿ ವಿಷಕಾರಿ ಅಣಬೆಗಳೂ ಇರುವ ಸಾಧ್ಯತೆ ಇರುವುದರಿಂದ, ಅವುಗಳನ್ನು ಸರಿಯಾಗಿ ಗುರುತಿಸದೆ ಸೇವಿಸುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಯಾವುದೇ ಅಪರಿಚಿತ ಕಾಡು ಅಣಬೆಗಳನ್ನು ಸೇವಿಸದೇ, ಆಹಾರ ಸೇವಿಸಿದ ಬಳಿಕ ವಾಂತಿ, ಭೇದಿ, ತಲೆಸುತ್ತು ಅಥವಾ ಸುಸ್ತು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕವಾಗಿದೆ.

8 people from two families fall ill and are admitted to hospital on the same day  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close