ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಎಬಿವಿಪಿ ಆಗ್ರಹ-ಉಗ್ರ ಹೋರಾಟದ ಎಚ್ಚರಿಕೆ-ABVP demands fulfillment of various demands of students - warns of violent struggle

SUDDILIVE || SHIVAMOGGA

ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಎಬಿವಿಪಿ ಆಗ್ರಹ-ಉಗ್ರ ಹೋರಾಟದ ಎಚ್ಚರಿಕೆ-ABVP demands fulfillment of various demands of students - warns of violent struggle    

Abvp, protest

ಶಿವಮೊಗ್ಗ, ಜು.22: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ವಿವಿಧ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಶಿವಮೊಗ್ಗ ಮಹಾನಗರ ಘಟಕವು ಸ್ಯಾದ್ರಿ ಕಾಲೇಜು ಎದುರು ಪ್ರತಿಭಟಿಸಿ ಕುಲಪತಿಗಳಿಗೆ ಪ್ರಾಂಶುಪಾಲರ ಮೂಲಕ ಮನವಿ ಸಲ್ಲಿಸಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ವಿದ್ಯಾರ್ಥಿ ಶಕ್ತಿಯೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಎಬಿವಿಪಿ ಮಹಾನಗರ ಕಾರ್ಯದರ್ಶಿ ನಿರಂಜನ್ ಹೆಚ್.ಎಸ್. ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಈ ಹಿಂದೆ ಹಲವು ಬಾರಿ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ವಿಶ್ವವಿದ್ಯಾಲಯದ ಗಮನ ಸೆಳೆಯಲಾಗಿದ್ದರೂ ಆಡಳಿತ ಮಂಡಳಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸುವ ಧೋರಣೆ ಖಂಡನೀಯವಾಗಿದ್ದು, ಕೂಡಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಸಹ್ಯಾದ್ರಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪ್ರವೇಶ ಪುನರಾರಂಭಕ್ಕೆ ಆಗ್ರಹ

ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಎಂ.ಎ. ಹಾಗೂ ಎಂ.ಎಸ್‌ಸಿ. ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಎಬಿವಿಪಿ ತಿಳಿಸಿದೆ. ಎಲ್ಲಾ ವಿಭಾಗಗಳ ಪ್ರವೇಶಾತಿಯನ್ನು ತಕ್ಷಣ ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಡಿಜಿಟಲ್ ಮೌಲ್ಯಮಾಪನ ರದ್ದುಪಡಿಸಲು ಒತ್ತಾಯ

ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅಂಕಗಳ ಕಡಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಕಾರಣ, ಈ ಪದ್ಧತಿಯನ್ನು ರದ್ದುಪಡಿಸಿ ಸಮರ್ಪಕ ಹಾಗೂ ಪಾರದರ್ಶಕ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

ಕ್ರೀಡಾ ಶುಲ್ಕದ ಪಾರದರ್ಶಕ ಬಳಕೆಗೆ ಒತ್ತಾಯ

ವಿದ್ಯಾರ್ಥಿಗಳಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿ ಕ್ರೀಡಾ ಶುಲ್ಕ ಸಂಗ್ರಹಿಸಲಾಗುತ್ತಿದ್ದರೂ, ಕ್ರೀಡಾ ಸಾಮಗ್ರಿ, ಮೈದಾನ ಸೌಲಭ್ಯ ಹಾಗೂ ತರಬೇತಿ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಎಬಿವಿಪಿ ಆರೋಪಿಸಿದೆ. ಕ್ರೀಡಾ ನಿಧಿಯ ಬಳಕೆಯನ್ನು ಪಾರದರ್ಶಕಗೊಳಿಸಿ, ವಿದ್ಯಾರ್ಥಿಗಳ ಕ್ರೀಡಾ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಘಟಿಕೋತ್ಸವ ನಡೆಸುವಂತೆ ಮನವಿ

ಅನೇಕ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದರೂ ಘಟಿಕೋತ್ಸವ ನಡೆಯದ ಕಾರಣ ಮೂಲ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರಗಳು ಸಿಗದೆ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಘಟಿಕೋತ್ಸವದ ದಿನಾಂಕವನ್ನು ಶೀಘ್ರವೇ ಪ್ರಕಟಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಒತ್ತಾಯಿಸಲಾಗಿದೆ.

ಬಸ್ ಸೌಲಭ್ಯ ಹೆಚ್ಚಿಸಲು ಆಗ್ರಹ

ಕುವೆಂಪು ವಿಶ್ವವಿದ್ಯಾಲಯ ಕ್ಯಾಂಪಸ್ ಹಾಗೂ ನಗರದಿಂದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಸಾರಿಗೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

ಉಗ್ರ ಹೋರಾಟದ ಎಚ್ಚರಿಕೆ

ಈ ಬಾರಿ ಕೂಡ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ವಿಶ್ವವಿದ್ಯಾಲಯ ಆಡಳಿತ ನಿರ್ಲಕ್ಷಿಸಿದರೆ ವಿದ್ಯಾರ್ಥಿ ಸಮುದಾಯದೊಂದಿಗೆ ಬೃಹತ್ ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಬಿವಿಪಿ ಎಚ್ಚರಿಕೆ ನೀಡಿದೆ. ಪ್ರತಿಭಟನೆಯಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಉಂಟಾಗುವ ಅಡಚಣೆ ಹಾಗೂ ಆಡಳಿತಾತ್ಮಕ ಗೊಂದಲಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ನೇರ ಹೊಣೆಗಾರವಾಗಿರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕುಲಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಎಬಿವಿಪಿ ಮಹಾನಗರ ಕಾರ್ಯದರ್ಶಿ ನಿರಂಜನ್ ಹೆಚ್.ಎಸ್. ಆಗ್ರಹಿಸಿದ್ದಾರೆ.

ABVP demands fulfillment of various demands of students - warns of violent struggle 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close