SUDDILIVE || SHIVAMOGGA
ಸಿಟಿ ರವಿ ವಿರುದ್ಧ ಕ್ರಮ ಖಂಡನೀಯ-ಆರಗ ಜ್ಞಾನೇಂದ್ರ-Action against City Ravi is condemnable - Araga Gyanendra
ಶಿವಮೊಗ್ಗ, ಜು.30: ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸರ್ಕಾರವು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಳಗಾವಿಯಲ್ಲಿ ಸಿ.ಟಿ. ರವಿ ಅವರನ್ನು ದೈಹಿಕವಾಗಿ ಮುಗಿಸುವ ಪ್ರಯತ್ನ ನಡೆದಿತ್ತು. ಇಂತಹ ಸಂದರ್ಭದಲ್ಲಿ ಅವರು ದೂರು ದಾಖಲಿಸುವುದು ಅಸಹಜವಲ್ಲ. ಆದರೆ ಈಗ ಅವರ ವಿರುದ್ಧ ನಿರಂತರವಾಗಿ ಪ್ರಕರಣಗಳನ್ನು ದಾಖಲಿಸುವ ಮೂಲಕ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ" ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2016-17ರಲ್ಲಿ ಸುಮಾರು 23 ಸಾವಿರ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು ಎಂದು ಆರೋಪಿಸಿದ ಆರಗ ಜ್ಞಾನೇಂದ್ರ, ರಾಜಕೀಯ ಹಾಗೂ ವೈಚಾರಿಕವಾಗಿ ಎದುರಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಅಧಿಕಾರದ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೂಲಕ ವಿರೋಧಿಗಳನ್ನು ಬೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
"ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಿಸಿದರೆ ಬಿಜೆಪಿ ಬೆದರಿಕೊಳ್ಳುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಅದನ್ನು ಎದುರಿಸುತ್ತೇವೆ," ಎಂದು ಅವರು ಹೇಳಿದರು.
ಯಶ್‌ಪಾಲ್ ಸುವರ್ಣ ಅವರಿಗೆ ನೋಟಿಸ್ ಜಾರಿಯಾಗಿದ್ದು, ಹಲವು ಬಿಜೆಪಿ ಶಾಸಕರ ವಿರುದ್ಧವೂ ಇದೇ ರೀತಿಯ ಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಸಿ.ಟಿ. ರವಿ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.
ಗೃಹ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದ ಅವರು, ರಾಜ್ಯದಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅವುಗಳನ್ನು ನಿಯಂತ್ರಿಸುವ ಬದಲು ರಾಜಕೀಯ ವಿರೋಧಿಗಳ ವಿರುದ್ಧ ಪ್ರಕರಣ ದಾಖಲಿಸುವುದರಲ್ಲೇ ಸರ್ಕಾರ ನಿರತವಾಗಿದೆ ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಅವರಿಗೂ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.
ಗೃಹ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, "ರಕ್ಷಣೆ ಬೇಕಾದರೆ ನೋಂದಣಿ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ರಕ್ಷಣೆ ನೀಡುವುದಿಲ್ಲ ಎನ್ನುವ ರೀತಿಯ ಹೇಳಿಕೆ ಗೃಹ ಸಚಿವರ ಸ್ಥಾನಕ್ಕೆ ತಕ್ಕದ್ದಲ್ಲ. ರಾಜ್ಯದ ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಆಸ್ತಿಗೆ ರಕ್ಷಣೆ ನೀಡುವುದು ಗೃಹ ಇಲಾಖೆಯ ಜವಾಬ್ದಾರಿಯಾಗಿದೆ," ಎಂದು ಹೇಳಿದರು.
ರಾಜ್ಯ ಸರ್ಕಾರ ಕಳೆದ ಎರಡು-ಮೂರು ತಿಂಗಳು ಮುಖ್ಯಮಂತ್ರಿಗಳ ಬದಲಾವಣೆ ಚರ್ಚೆಯಲ್ಲೇ ಕಾಲ ಕಳೆಯಿತು. ಈಗ ಸಚಿವ ಸಂಪುಟ ಪುನರ್‌ರಚನೆಯ ರಾಜಕೀಯ ಬೆಳವಣಿಗೆಗಳಲ್ಲಿ ನಿರತವಾಗಿದೆ. ಇಡೀ ಸರ್ಕಾರ ದೆಹಲಿಯಲ್ಲೇ ಕುಳಿತಿದ್ದು, ಕರ್ನಾಟಕದಲ್ಲಿ ಪರಿಣಾಮಕಾರಿ ಆಡಳಿತವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.
140ಕ್ಕೂ ಹೆಚ್ಚು ಸ್ಥಾನಗಳ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಅಧಿಕಾರ ಉಳಿಸಿಕೊಳ್ಳುವ ರಾಜಕಾರಣದಲ್ಲೇ ಸರ್ಕಾರ ತೊಡಗಿಕೊಂಡಿದ್ದು, ಜನಪರ ಆಡಳಿತ ನೀಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
Action against City Ravi is condemnable - Araga Gyanendra

