ಕುಂಚೇನಹಳ್ಳಿ-ಮದುವೆ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ-Fraud of lakhs of rupees on the pretext of getting married

 SUDDILIVE || SHIVAMOGGA

ಕುಂಚೇನಹಳ್ಳಿ-ಮದುವೆ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ-Fraud of lakhs of rupees on the pretext of getting married      

Fraud, kunchenahalli


ಶಿವಮೊಗ್ಗ, ಜು.29: ಮದುವೆ ಮಾಡಿಸಿಕೊಡುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ಮಹೇಶ್ವರಪ್ಪ ಕೆ.ಎಸ್. ಅವರು ನೀಡಿರುವ ದೂರಿನ ಮೇರೆಗೆ,ಕುಂಚೇನಹಳ್ಳಿ ಗ್ರಾಮದ ನಿವಾಸಿ ಎಚ್.ಟಿ. ಪಾಲಕ್ಷಯ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 316 ಹಾಗೂ 318(4) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ದೂರಿನ ಪ್ರಕಾರ, ದೂರುದಾರರ ಅಕ್ಕನ ಮಗನಿಗೆ ಹಾಗೂ ಸಂಬಂಧಿಕರಿಗೆ ಮದುವೆ ಮಾಡಿಸಿಕೊಡುವುದಾಗಿ ಪಾಲಕ್ಷಯ್ಯ ಭರವಸೆ ನೀಡಿದ್ದನು. ತಿಪಟೂರು ಸಮೀಪದ ಬಿಡದಿ ಹಾಗೂ ಸುರಭಿ ಆಶ್ರಮಗಳಲ್ಲಿ ಮದುವೆ ವಯಸ್ಸಿನ ಯುವತಿಯರಿದ್ದು, ಆಶ್ರಮದ ಮೂಲಕ ಪರಿಶೀಲನೆ ನಡೆಸಿ ಇಲಾಖೆಯ ಅನುಮತಿ ಪಡೆದು ವಿವಾಹ ನೋಂದಣಿ ಮಾಡಿಸಿಕೊಡಲಾಗುತ್ತದೆ ಎಂದು ನಂಬಿಕೆ ಹುಟ್ಟಿಸಿದ್ದಾನೆ ಎನ್ನಲಾಗಿದೆ. ಆಶ್ರಮದ ಶುಲ್ಕವಾಗಿ ಒಬ್ಬರಿಗೆ ₹1 ಲಕ್ಷ ಪಾವತಿಸಬೇಕೆಂದು ಹೇಳಿ ಹಣ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ನಂಬಿಕೆಯಲ್ಲಿ ದೂರುದಾರರು ವಿವಿಧ ದಿನಾಂಕಗಳಲ್ಲಿ ಫೋನ್‌ಪೇ ಹಾಗೂ ಆರ್‌ಟಿಜಿಎಸ್‌ ಮೂಲಕ ಒಟ್ಟು ₹2 ಲಕ್ಷವನ್ನು ಪಾಲಕ್ಷಯ್ಯ ಅವರಿಗೆ ವರ್ಗಾಯಿಸಿದ್ದಾರೆ. ಇದೇ ರೀತಿಯಲ್ಲಿ ಬೆಳಲಕಟ್ಟೆ ಗ್ರಾಮದ ಚನ್ನಬಸಪ್ಪ ಅವರಿಂದ ₹1.90 ಲಕ್ಷ, ಸೋಮನಕೊಪ್ಪದ ಹನುಮಂತಪ್ಪ ಅವರಿಂದ ₹1.15 ಲಕ್ಷ ಹಾಗೂ ಹೊಳೆಹನಸವಾಡಿಯ ಕೆ.ಎಂ. ಸದಾಶಿವ ಅವರಿಂದ ₹1.20 ಲಕ್ಷ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಹಣ ಪಡೆದ ಬಳಿಕ 15 ದಿನಗಳಿಂದ ಒಂದು ತಿಂಗಳೊಳಗೆ ಮದುವೆ ಮಾಡಿಸಿಕೊಡುವುದಾಗಿ ಹೇಳಿದ್ದರೂ, ಸುಮಾರು ಎಂಟು ತಿಂಗಳು ಕಳೆದರೂ ಯಾವುದೇ ಮದುವೆ ನೆರವೇರಿಸಿಲ್ಲ. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಆರೋಪಿಯು ಸಂಪರ್ಕಕ್ಕೆ ಸಿಗದೆ, ಮೊಬೈಲ್ ಕರೆಗಳನ್ನೂ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಆರೋಪಿಯ ಮನೆಗೆ ತೆರಳಿ ವಿಚಾರಿಸಿದಾಗಲೂ ಕುಟುಂಬದವರು ಆತ ಮನೆಯಲ್ಲಿ ಇಲ್ಲ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಘಟನೆಯ ಕುರಿತು ತಡವಾಗಿ ದೂರು ನೀಡಲು ಕಾರಣವನ್ನು ಸಹ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯು ಮದುವೆ ಮಾಡಿಸಿಕೊಡುತ್ತೇನೆ ಎಂಬ ಭರವಸೆ ನೀಡಿದ್ದರಿಂದ ಮತ್ತು ನಂತರ ಸಂಪರ್ಕಕ್ಕೆ ಸಿಗದೆ ಹೋದ ಕಾರಣ ಈ ವಿಷಯ ಸ್ಪಷ್ಟವಾಗಿ ತಿಳಿದುಬಂದ ಬಳಿಕವೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಯ ವಿರುದ್ಧ ತನಿಖೆ ಆರಂಭಿಸಿದ್ದು, ವಂಚನೆಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು ಹಾಗೂ ಇತರ ಸಂತ್ರಸ್ತರ ಮಾಹಿತಿಯನ್ನೂ ಪರಿಶೀಲಿಸುತ್ತಿದ್ದಾರೆ.

Fraud of lakhs of rupees on the pretext of getting married

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close