ಕುಲಪತಿಗಳ ವಜಾಕ್ಕೆ ಬಿಜೆಪಿ ಯುವ ಮೋರ್ಚ ಆಗ್ರಹ-BJP Youth Front demands removal of Vice Chancellor

 SUDDILIVE || SHIVAMOGGA

ಕುಲಪತಿಗಳ ವಜಾಕ್ಕೆ ಬಿಜೆಪಿ ಯುವ ಮೋರ್ಚ ಆಗ್ರಹ-BJP Youth Front demands removal of Vice Chancellor    

Bjp, demand

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಗಳು, ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿ, ಕುಲಪತಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಮುಖಂಡರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾದ ಹಲವು ನಿರ್ಧಾರಗಳನ್ನು ಆಡಳಿತ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು. ಶುಲ್ಕ ಹೆಚ್ಚಳ, ಅಂಕಪಟ್ಟಿ ವಿತರಣೆಯಲ್ಲಿ ವಿಳಂಬ, ಪದವಿ ಪ್ರದಾನ ಸಮಾರಂಭದ ಹೆಚ್ಚುವರಿ ಶುಲ್ಕ ಸೇರಿದಂತೆ ವಿವಿಧ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ವಿಶ್ವವಿದ್ಯಾಲಯ ಆಡಳಿತ ಕೂಡಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇತ್ತೀಚೆಗೆ ಹೆಚ್ಚಿಸಿರುವ ವಿವಿಧ ಶುಲ್ಕಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ವಿತರಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಕ್ಷಣ ಸರಿಪಡಿಸಬೇಕು ಹಾಗೂ ಪದವಿ ಪ್ರದಾನ (ಕಾನ್ವೊಕೇಶನ್) ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, LMS ಸೇರಿದಂತೆ ವಿವಿಧ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಕ್ರಮವನ್ನು ರದ್ದುಪಡಿಸಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹಾಸ್ಟೆಲ್, ಗ್ರಂಥಾಲಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನೇಮಕಾತಿ, ಟೆಂಡರ್, ಖರೀದಿ ಹಾಗೂ ಆಡಳಿತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಆಗ್ರಹಿಸಿದೆ.

ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿರುವ ಎಲ್ಲ ನಿರ್ಧಾರಗಳನ್ನು ಹಿಂಪಡೆಯಬೇಕು ಹಾಗೂ ಆಡಳಿತ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಕುಲಪತಿಗಳು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿಗೆ ವಿಶ್ವವಿದ್ಯಾಲಯ ಆಡಳಿತ ಶೀಘ್ರ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಹಾಗೂ ಪ್ರಭಾರಿ ರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ ಮತ್ತು ದರ್ಶನ್, ಶಿವಮೊಗ್ಗ ನಗರ ಮಂಡಲ ಅಧ್ಯಕ್ಷ ರಾಹುಲ್ ಬಿದರೆ, ಗ್ರಾಮಾಂತರ ಮಂಡಲ ಅಧ್ಯಕ್ಷ ಅನಿಲ್ ಲಕ್ಕಿನಕೊಪ್ಪ, ಭದ್ರಾವತಿ ಮಂಡಲ ಅಧ್ಯಕ್ಷ ಪ್ರಜ್ವಲ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಕಿರಣ್ ಪಟೇಲ್, ಜಿಲ್ಲಾ ಉಪಾಧ್ಯಕ್ಷರಾದ ಸಂಜಯ್ ಮತ್ತು ಯಶಸ್ವಿ, ಜಿಲ್ಲಾ ಕಾರ್ಯದರ್ಶಿಗಳಾದ ಹರೀಶ್ ನಾಯ್ಕ್ ಹಾಗೂ ಯುವರಾಜ್, ಜಿಲ್ಲಾ ಖಜಾಂಚಿ ವಿವೇಕ್ ಹೆಬ್ಬಾರ್, ಜಿಲ್ಲಾ ಮಾಧ್ಯಮ ಸಂಚಾಲಕ ಚಂದ್ರಶೇಖರ್, ಶಿವಮೊಗ್ಗ ನಗರ ಪ್ರಧಾನ ಕಾರ್ಯದರ್ಶಿಗಳಾದ ಅಭಿಷೇಕ್ ಮತ್ತು ಶಶಿಕುಮಾರ್, ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು ಮತ್ತು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಭಾಗವಹಿಸಿದ್ದರು.

BJP Youth Front demands removal of Vice Chancellor 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close