ತಂದೆಯಂತೆ ನೇರ ನುಡಿಯ ನಾಯಕ ಹೆಚ್ ಎಂ ಸಿ- ಮಧು ಬಂಗಾರಪ್ಪ-HMC is a leader who speaks straight like his father - Madhu Bangarappa

SUDDILIVE || SHIVAMOGGA

ತಂದೆಯಂತೆ ನೇರ ನುಡಿಯ ನಾಯಕ ಹೆಚ್ ಎಂ ಸಿ- ಮಧು ಬಂಗಾರಪ್ಪ-HMC is a leader who speaks straight like his father - Madhu Bangarappa    

Hmc, madhu

ಶಿವಮೊಗ್ಗ: ಮಾಜಿ ಶಾಸಕ ಹಾಗೂ ಹಿರಿಯ ರಾಜಕೀಯ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಜಿ ಸಚಿವ ಮಧು ಬಂಗಾರಪ್ಪ ಅವರು ಭಾವುಕರಾಗಿ ಮಾತನಾಡಿದರು. ಚಂದ್ರಶೇಖರಪ್ಪ ಅವರು ತಮ್ಮ ಕುಟುಂಬಕ್ಕೆ ಅತ್ಯಂತ ಆತ್ಮೀಯರಾಗಿದ್ದು, ತಮ್ಮ ರಾಜಕೀಯ ಜೀವನದ ಆರಂಭಿಕ ಹಂತದಲ್ಲಿ ಮಹತ್ವದ ಬೆಂಬಲ ನೀಡಿದ ನಾಯಕರಾಗಿದ್ದರು ಎಂದು ಸ್ಮರಿಸಿದರು.

1999ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹೆಚ್.ಎಂ. ಚಂದ್ರಶೇಖರಪ್ಪ ಅವರ ಪರವಾಗಿ ಸತತ ಮೂರೂವರೆ ದಿನಗಳ ಕಾಲ ಪ್ರಚಾರ ನಡೆಸಿದ್ದೆ. ನನ್ನ ತಂದೆ ಎಸ್. ಬಂಗಾರಪ್ಪ ಅವರನ್ನು ಹೊರತುಪಡಿಸಿ ನಾನು ಮೊದಲ ಬಾರಿಗೆ ಮತ ಕೇಳಿದ್ದು ಚಂದ್ರಶೇಖರಪ್ಪ ಅವರಿಗಾಗಿಯೇ ಎಂದು ನೆನಪಿಸಿಕೊಂಡರು.

ತಂದೆಯಂತೆಯೇ ನೇರ ನುಡಿಯ ನಾಯಕ

ಚಂದ್ರಶೇಖರಪ್ಪ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಮಧು ಬಂಗಾರಪ್ಪ, "ನಮ್ಮ ತಂದೆ ಬಂಗಾರಪ್ಪ ಅವರಂತೆಯೇ ಅವರು ಕೂಡ ನೇರ ನುಡಿಯ ನಾಯಕರು. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ಮನೆಗೆ ಬಂದು ಧೈರ್ಯ ತುಂಬುತ್ತಿದ್ದರು. ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿಯೂ ದೊಡ್ಡ ನಷ್ಟವಾಗಿದೆ" ಎಂದು ಹೇಳಿದರು.

ಕುಟುಂಬದ ಜೊತೆ ಸದಾ ನಿಲ್ಲುತ್ತೇವೆ

ಚಂದ್ರಶೇಖರಪ್ಪ ಅವರ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪುತ್ರರಾದ ಯೋಗೇಶ್ ಹಾಗೂ ಶರಣ್ ಅವರೊಂದಿಗೆ ನಾವು ಸದಾ ಇರುತ್ತೇವೆ. ಪಕ್ಷಾತೀತವಾಗಿ ಹಾಗೂ ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಕೆಪಿಎಸ್‌ಸಿ ಪರೀಕ್ಷಾ ಅಕ್ರಮಕ್ಕೆ ತೀವ್ರ ಆಕ್ರೋಶ

ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

"ಸಾವಿರಾರು ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪ್ರಕರಣದ ಕುರಿತು ಸಂಪೂರ್ಣ ನಿಷ್ಪಕ್ಷಪಾತ ಹಾಗೂ ಕಠಿಣ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದರು.

ಪಾರದರ್ಶಕತೆ ಇಲ್ಲದಿದ್ದರೆ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅತ್ಯಗತ್ಯ ಎಂದು ಒತ್ತಿಹೇಳಿದ ಅವರು, "ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಹೋಗುತ್ತದೆ. ನಾವು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಅದೇ ರೀತಿಯ ವ್ಯವಸ್ಥೆ ಎಲ್ಲ ನೇಮಕಾತಿಗಳಲ್ಲೂ ಇರಬೇಕು" ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

"ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಕಾಂಗ್ರೆಸ್‌ನ ಹಿರಿಯ ನಾಯಕರು ದೆಹಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದೆಹಲಿಗೆ ಭೇಟಿ ನೀಡಲಿದ್ದಾರೆ. ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆಯಾಗಲಿ, ವರಿಷ್ಠರ ತೀರ್ಮಾನವೇ ಅಂತಿಮ. ರಾಜ್ಯದ ಹಿತ ಹಾಗೂ ಪಕ್ಷದ ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ದೇಶದ ಯುವ ಸಮುದಾಯದ ಭವಿಷ್ಯದೊಂದಿಗೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಮಧು ಬಂಗಾರಪ್ಪ ಆರೋಪಿಸಿದರು.

"ಸೋಶಿಯಲ್ ಮೀಡಿಯಾ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ ಈಗ ಅದೇ ಸೋಶಿಯಲ್ ಮೀಡಿಯಾ ಸವಾಲಾಗಿ ಪರಿಣಮಿಸಿದೆ. ದೇಶದ ಯುವಕರು ಬೀದಿಗಿಳಿದು ಹೋರಾಟ ನಡೆಸಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಯುವಶಕ್ತಿಯ ಹೋರಾಟಕ್ಕೆ ಇಂದು ದೊಡ್ಡ ಜಯ ಸಿಕ್ಕಿದೆ" ಎಂದು ಹೇಳಿದರು.

ಪೊಲೀಸ್ ಕ್ರಮ ಖಂಡನೆ

ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ ಅವರು, "ಹೋರಾಟಗಾರರ ವಿರುದ್ಧ ಯಾವುದೇ ಕನಿಷ್ಠ ಪ್ರೋಟೋಕಾಲ್ ಹಾಗೂ ನಿಯಮಗಳನ್ನು ಪಾಲಿಸದೆ ಲಾಠಿ ಚಾರ್ಜ್ ನಡೆಸಲಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಅಮಾಯಕ ಯುವಕರು ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಹೊಣೆಗಾರರು" ಎಂದು ಆರೋಪಿಸಿದರು.

ಯುವಕರ ಭವಿಷ್ಯದೊಂದಿಗೆ ಯಾವುದೇ ಸರ್ಕಾರ ಚೆಲ್ಲಾಟವಾಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರ ಸಮಸ್ಯೆಗಳ ಬಗ್ಗೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮುಂಬರುವ ಸಂಸತ್ ಅಧಿವೇಶನದಲ್ಲೂ ಈ ವಿಷಯವನ್ನು ವಿರೋಧ ಪಕ್ಷಗಳು ಪ್ರಮುಖವಾಗಿ ಪ್ರಸ್ತಾಪಿಸಲಿವೆ ಎಂದು ಮಧು ಬಂಗಾರಪ್ಪ ತಿಳಿಸಿದರು.

HMC is a leader who speaks straight like his father - Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close