SUDDILIVE || SHIVAMOGGA
ಭದ್ರಾ ಅಚ್ಚುಕಟ್ಟು ರೈತರಿಗೆ ಆಘಾತ: ಮುಂಗಾರು ಬೆಳೆಗಳಿಗೆ ನೀರು ಇಲ್ಲ, ಯಾವುದೇ ಬೆಳೆ ಬೆಳೆಯದಂತೆ ಸೂಚನೆ-Bhadra Achukattu farmers in shock: No water for monsoon crops, instructions not to grow any crops

ಕಳೆದ ವರ್ಷದ ಚಿತ್ರ

ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಂದ ಜುಲೈ 4ರಂದು ಪ್ರಕಟಣೆ ಹೊರಡಿಸಲಾಗಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಜಲಾಶಯದಲ್ಲಿ ನೀರಿನ ಸಂಗ್ರಹಣೆ ತೀರಾ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಬಲದಂಡೆ ಮತ್ತು ಎಡದಂಡೆ ಮುಖ್ಯ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಈಗಾಗಲೇ ಜೂನ್ 30ರಂದು ಪ್ರಕಟಣೆ ಸಂಖ್ಯೆ 516ರ ಮೂಲಕ ತಿಳಿಸಲಾಗಿತ್ತು. ಇದೀಗ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಜುಲೈ 3ರ ಸುತ್ತೋಲೆಯಂತೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ನಿರ್ದೇಶನ ನೀಡಲಾಗಿದೆ.
ಅದರಂತೆ, ಜಲಾಶಯದಲ್ಲಿರುವ ನೀರನ್ನು ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಮೀಸಲಿಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹಣೆ ಇಲ್ಲದಿರುವುದರಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಯಾವುದೇ ಮುಂಗಾರು ಬೆಳೆ ಬೆಳೆಯದಂತೆ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಈ ಪ್ರಕಟಣೆಯಿಂದ ಶಿವಮೊಗ್ಗ, ದಾವಣಗೆರೆ ಸೇರಿದಂತೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಸಾವಿರಾರು ರೈತರಿಗೆ ತೀವ್ರ ಆತಂಕ ಉಂಟಾಗಿದ್ದು, ಮುಂಗಾರು ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ. ರೈತರು ಮಳೆಯ ನಿರೀಕ್ಷೆಯಲ್ಲಿದ್ದರೂ ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗದಿರುವುದು ಕೃಷಿ ವಲಯಕ್ಕೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ.