ಕಡೇಮನೆ ರಸ್ತೆಗಾಗಿ ಪುಟಾಣಿಗಳ ವಿನೂತನ ಪ್ರತಿಭಟನೆ-ಸ್ಥಳಕ್ಕೆ ದೌಡಾಯಿಸಿದ ಹಾಲಿ-ಮಾಜಿ ಶಾಸಕರು- Children's innovative protest for Kademane Road - Current and former MLAs rushed to the spot

 SUDDILIVE || THIRTHAHALLI

ಕಡೇಮನೆ ರಸ್ತೆಗಾಗಿ ಪುಟಾಣಿಗಳ ವಿನೂತನ ಪ್ರತಿಭಟನೆ-ಸ್ಥಳಕ್ಕೆ ದೌಡಾಯಿಸಿದ ಹಾಲಿ-ಮಾಜಿ ಶಾಸಕರು- Children's innovative protest for Kademane Road - Current and former MLAs rushed to the spot      
Children, protest

ತೀರ್ಥಹಳ್ಳಿ, ಜುಲೈ 28: ರಸ್ತೆ ಸಮಸ್ಯೆ ಪರಿಹರಿಸಿಕೊಡಬೇಕೆಂದು ಸಾಮಾನ್ಯವಾಗಿ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುವುದು ಸಾಮಾನ್ಯ. ಆದರೆ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆ ಮಾತ್ರ ಎಲ್ಲರ ಗಮನ ಸೆಳೆದಿದೆ. ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇಮನೆ ಗ್ರಾಮದ ಶಾಲಾ ಮಕ್ಕಳು ತಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಬೇಕೆಂದು ಶಾಲಾ ಸಮವಸ್ತ್ರದಲ್ಲೇ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರು.

ರಸ್ತೆ ಇಲ್ಲದೆ ದಿನವೂ 3 ಕಿ.ಮೀ ಕಾಲ್ನಡಿಗೆ

ಕಡೇಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಕೆಸರುಮಯವಾಗಿರುವ ಕಾರಣ ಯಾವುದೇ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಪರಿಣಾಮ ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಸುಮಾರು ಮೂರು ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಈ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ

ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, "ಸದ್ಯಕ್ಕೆ ₹20 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ ಬೇರೆ ಕಡೆಯಿಂದ ರಸ್ತೆ ಮಾಡಿಸಿದ್ದೇನೆ. ಸೇತುವೆಯೂ ನಿರ್ಮಾಣವಾಗಬೇಕಿದೆ. ಈ ವಿಚಾರವನ್ನು ನನ್ನ ಕಚೇರಿಗೆ ಬಂದು ತಿಳಿಸಬಹುದಿತ್ತಲ್ಲವೇ? ಶಾಲಾ ಮಕ್ಕಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡುವ ಅಗತ್ಯವೇನಿತ್ತು? ನನ್ನ ಮರ್ಯಾದೆ ತೆಗೆಯಲು ಹೀಗೆ ಮಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದರು.

ಗ್ರಾಮಸ್ಥರ ಆಕ್ರೋಶ

ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟವನ್ನು ವಿವರಿಸಿದರು.

"ಶಾಲೆ ಇದೆ, ಆದರೆ ಶಾಲೆಗೆ ಹೋಗಲು ರಸ್ತೆ ಇಲ್ಲ. ಸಂಪೂರ್ಣ ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುವುದಿಲ್ಲ. ಮಕ್ಕಳು ಪ್ರತಿದಿನ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ₹20 ಲಕ್ಷದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಬಿಂತ್ಲಾ ಗ್ರಾಮದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದೀರಾದರೂ, ಅಲ್ಲಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಕಡೇಮನೆ ಗ್ರಾಮಕ್ಕೆ ಇಂದಿಗೂ ರಸ್ತೆ ನಿರ್ಮಿಸಿಲ್ಲ," ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಸ್ಥಳದಲ್ಲೇ ಕೆಲಕಾಲ ಗ್ರಾಮಸ್ಥರು ಮತ್ತು ಶಾಸಕರ ನಡುವೆ ವಾಗ್ವಾದ ನಡೆಯಿತು.

"ಸರ್ಕಾರ ಹಣ ಕೊಡುತ್ತಿಲ್ಲ" – ಶಾಸಕ

ನಂತರ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ₹2 ರಿಂದ ₹3 ಕೋಟಿ ಅಗತ್ಯವಿದ್ದು, ಸರ್ಕಾರದಿಂದ ಸಮರ್ಪಕ ಅನುದಾನ ದೊರೆಯುತ್ತಿಲ್ಲ ಎಂದು ಹೇಳಿದರು.

"ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತಿದೆ. ರಸ್ತೆ ಹಾಗೂ ಸೇತುವೆ ನಿರ್ಮಿಸಲು ಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಅನುದಾನ ತರಲು ಪ್ರಯತ್ನಿಸುತ್ತೇನೆ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸದ್ಯಕ್ಕೆ ₹20 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಮಾಡಿಸುತ್ತೇನೆ," ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಮಾಜಿ ಶಾಸಕ ಕಿಮ್ಮನೆ ರತ್ನಾಕರ್

ಪ್ರತಿಭಟನೆಯ ವೇಳೆ ಮಾಜಿ ಶಾಸಕ ಕೂಡ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅಹವಾಲು ಆಲಿಸಿದರು.

ಮಾತನಾಡಿದ ಅವರು, "ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿಜಕ್ಕೂ ಗಂಭೀರವಾಗಿದೆ. ಈ ವಿಚಾರವನ್ನು ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ತರುತ್ತೇನೆ. ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡುವ ಮೂಲಕ ಸಮಸ್ಯೆಯನ್ನು ಎಲ್ಲರ ಗಮನಕ್ಕೆ ತಂದಿದ್ದೀರಿ. ಆದಷ್ಟು ಬೇಗ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸುತ್ತೇನೆ," ಎಂದು ಹೇಳಿದರು.

ಹಲವು ವರ್ಷಗಳಿಂದ ಬಗೆಹರಿಯದ ರಸ್ತೆ ಸಮಸ್ಯೆ

ಕಡೇಮನೆ ಗ್ರಾಮದ ರಸ್ತೆ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಗ್ರಾಮಸ್ಥರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಈ ಬಾರಿ ಪುಟಾಣಿ ವಿದ್ಯಾರ್ಥಿಗಳೇ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಸಾರ್ವಜನಿಕರ ಗಮನ ಸೆಳೆದಿದ್ದು, ಜನಪ್ರತಿನಿಧಿಗಳು ನೀಡಿರುವ ಭರವಸೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಗ್ರಾಮಸ್ಥರು ಕಾದು ನೋಡುತ್ತಿದ್ದಾರೆ.

Children's innovative protest for Kademane Road - Current and former MLAs rushed to the spot

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close