SUDDILIVE || THIRTHAHALLI
ತೀರ್ಥಹಳ್ಳಿ–ನಗರ ನಡುವೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಚಾಲನೆ- New KSRTC bus service launched between Thirthahalli and Nagar
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ತೀರ್ಥಹಳ್ಳಿ–ನಗರ ಮಾರ್ಗದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ನಗರ ಹೋಬಳಿಯ ಕಾನ್ಗೋಡ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದ್ದರೂ, ತೀರ್ಥಹಳ್ಳಿ ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ನೇರ ಬಸ್ ಸಂಪರ್ಕದ ಕೊರತೆಯಿಂದ ಜನರಿಗೆ ಈ ಸೌಲಭ್ಯಗಳ ಸಂಪೂರ್ಣ ಪ್ರಯೋಜನ ದೊರೆಯುತ್ತಿರಲಿಲ್ಲ ಎಂದು ಹೇಳಿದರು.
ಈ ಸಮಸ್ಯೆಯನ್ನು ಮನಗಂಡು ತೀರ್ಥಹಳ್ಳಿ–ನಗರ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೆ. ಅದರ ಫಲವಾಗಿ ಇದೀಗ ಹೊಸ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೊಸ ಬಸ್ ಸೇವೆಯಿಂದ ಪ್ರತಿದಿನ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ತೀರ್ಥಹಳ್ಳಿ, ನಗರ ಮತ್ತು ಶಿವಮೊಗ್ಗಕ್ಕೆ ಸಂಚರಿಸುವವರಿಗೆ ಸುಲಭ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಉಚಿತ ಪ್ರಯಾಣದ ಯೋಜನೆಯ ಲಾಭ ಪಡೆಯುವ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ ಎಂದು ಅವರು ತಿಳಿಸಿದರು.
ನೂತನ ಬಸ್ ವೇಳಾಪಟ್ಟಿ
- ರಾವೆಯಿಂದ ಬೆಳಿಗ್ಗೆ 8:15ಕ್ಕೆ ಹೊರಟು 8:50ಕ್ಕೆ ನಗರ ತಲುಪಲಿದೆ.
- ನಗರದಿಂದ ಬೆಳಿಗ್ಗೆ 9:05ಕ್ಕೆ ಹೊರಟು 10:05ಕ್ಕೆ ತೀರ್ಥಹಳ್ಳಿ ತಲುಪಲಿದೆ.
- ತೀರ್ಥಹಳ್ಳಿಯಿಂದ ಬೆಳಿಗ್ಗೆ 10:15ಕ್ಕೆ ಹೊರಟು ಶಿವಮೊಗ್ಗ ತಲುಪಲಿದೆ.
- ಶಿವಮೊಗ್ಗದಿಂದ ಮಧ್ಯಾಹ್ನ 3:15ಕ್ಕೆ ಹೊರಟು ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪ ತಲುಪಲಿದೆ.
- ಕೊಪ್ಪದಿಂದ ಸಂಜೆ 4:15ಕ್ಕೆ ಹೊರಟು ತೀರ್ಥಹಳ್ಳಿ ತಲುಪಿದ ಬಳಿಕ 5:45ಕ್ಕೆ ತೀರ್ಥಹಳ್ಳಿಯಿಂದ ಹೊರಟು 6:45ಕ್ಕೆ ನಗರ ತಲುಪಲಿದೆ.
- ಬಳಿಕ ಬಸ್ ರಾತ್ರಿ ರಾವೆ ತಲುಪಿ ಅಲ್ಲಿಯೇ ನಿಲುಗಡೆಯಾಗಲಿದೆ.
ಗ್ರಾಮೀಣ ಭಾಗದ ಜನರಿಗೆ ನಿರಂತರ ಹಾಗೂ ಸುಲಭ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಈ ಹೊಸ ಕೆಎಸ್‌ಆರ್‌ಟಿಸಿ ಬಸ್ ಸೇವೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಪಡೆಯುವ ನಿರೀಕ್ಷೆಯಿದೆ. ವಿಶೇಷವಾಗಿ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ದೈನಂದಿನ ಕೂಲಿ ಕಾರ್ಮಿಕರಿಗೆ ಈ ಸೇವೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

