SUDDILIVE || SHIVAMOGGA
ಖೋಟಾ ನೋಟು ಪ್ರಕರಣ- ನಾಲ್ವರು ಆರೋಪಿಗಳಿಗೆ ಸಜೆ-Counterfeit currency case - Four accused sentenced
ಶಿವಮೊಗ್ಗ, ಜು.14: ಎಂಟು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದ ಖೋಟಾ ನೋಟು ಚಲಾವಣೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹52 ಸಾವಿರ ದಂಡ ವಿಧಿಸಿದೆ.
2018ರ ಫೆಬ್ರವರಿ 7ರಂದು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಆಗಿನ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ವಿ. ಗಂಗಾಧರಪ್ಪ ಅವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಗೋಪಾಳ ಖಾಸಗಿ ಬಸ್ ನಿಲ್ದಾಣದ ಬಳಿ ಬಲೆ ಬೀಸಿದ್ದರು.
ನೇತಾಜಿ ಸರ್ಕಲ್ ಕಡೆಯಿಂದ ಅನುಪಿನಕಟ್ಟೆ ಮಾರ್ಗವಾಗಿ ಬೈಕ್‌ನಲ್ಲಿ ಬಂದ ಟಿಪ್ಪುನಗರ ನಿವಾಸಿಗಳಾದ ಅಮ್ಜದ್ ಪಾಷಾ (39) ಹಾಗೂ ಮೌಸಿನ್ ಖಾನ್ (33) ಅವರನ್ನು ತಡೆದು ಪರಿಶೀಲಿಸಿದಾಗ, ಅಮ್ಜದ್ ಪಾಷಾ ಬಳಿ ₹500 ಮುಖಬೆಲೆಯ 95 ಖೋಟಾ ನೋಟುಗಳು ಹಾಗೂ ಮೌಸಿನ್ ಖಾನ್ ಬಳಿ ₹500 ಮುಖಬೆಲೆಯ 167 ಖೋಟಾ ನೋಟುಗಳು ಪತ್ತೆಯಾಗಿದ್ದವು. ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದರು.
ಪಶ್ಚಿಮ ಬಂಗಾಳದಿಂದ ಖೋಟಾ ನೋಟು ಖರೀದಿ
ವಿಚಾರಣೆ ವೇಳೆ ಆರೋಪಿಗಳು, ತೌಸಿಫ್ ಹಾಗೂ ಸೈಯದ್ ಇರ್ಪಾನ್ ಎಂಬವರೊಂದಿಗೆ ಸೇರಿ ಪಶ್ಚಿಮ ಬಂಗಾಳಕ್ಕೆ ತೆರಳಿ, ಅಲ್ಲಿನ ವ್ಯಕ್ತಿಯೊಬ್ಬರಿಂದ ಮೊಬೈಲ್ ಸಂಖ್ಯೆ 7478534210 ಮೂಲಕ ಸಂಪರ್ಕ ಸಾಧಿಸಿ ₹70 ಸಾವಿರ ಅಸಲು ನೋಟುಗಳನ್ನು ನೀಡಿ ₹2 ಲಕ್ಷ ಮುಖಬೆಲೆಯ ₹500ರ ಖೋಟಾ ನೋಟುಗಳನ್ನು ಖರೀದಿಸಿರುವುದಾಗಿ ಬಾಯ್ಬಿಟ್ಟಿದ್ದರು.
ಅಲ್ಲದೆ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಈ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದಾಗಿಯೂ ತನಿಖೆಯಲ್ಲಿ ಬಹಿರಂಗವಾಗಿತ್ತು.
ಪ್ರಕರಣ ದಾಖಲು
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 248/2018ರಡಿ ಭಾರತೀಯ ದಂಡ ಸಂಹಿತೆಯ ಕಲಂ 489A, 489B, 489C, 420 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ವಿ. ಗಂಗಾಧರಪ್ಪ ಅವರು ನಡೆಸಿ ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದರು.
ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಗಳೆಲ್ಲವೂ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶ ಯಶವಂತ ಕುಮಾರ್ ಅವರು ಜುಲೈ 14, 2026ರಂದು ತೀರ್ಪು ಪ್ರಕಟಿಸಿ, ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂ 489A ಹಾಗೂ 34ರಡಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹52,000 ದಂಡ ವಿಧಿಸಿ ಆದೇಶಿಸಿದರು.
ಈ ತೀರ್ಪಿನೊಂದಿಗೆ 2018ರಲ್ಲಿ ಬೆಳಕಿಗೆ ಬಂದಿದ್ದ ಶಿವಮೊಗ್ಗದ ಖೋಟಾ ನೋಟು ಚಲಾವಣೆ ಜಾಲದ ಪ್ರಮುಖ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಅಂತಿಮ ತೆರೆ ಬಿದ್ದಿದೆ.
