SUDDILIVE || SHIVAMOGGA
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಿರೀಕ್ಷಿಸಿರಲಿಲ್ಲ-ಬಿವೈಆರ್-Dharmendra Pradhan's resignation was not expected - BYR
ಶಿವಮೊಗ್ಗ, ಜುಲೈ 26: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವ ಬೆಳವಣಿಗೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, "ಈ ಬೆಳವಣಿಗೆಯನ್ನು ನಾವು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಆದರೆ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ಅವರು ರಾಜೀನಾಮೆ ನೀಡಿದ್ದಾರೆ" ಎಂದು ಹೇಳಿದರು.
ನೀಟ್ ಪರೀಕ್ಷೆ ಅಕ್ರಮದ ವಿಚಾರದಲ್ಲಿ ಸಿಜೆಪಿ (CJP) ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಈ ಹೋರಾಟಕ್ಕೆ ಬೇರೆ ಬೇರೆ ಶಕ್ತಿಗಳು ಕೂಡ ಕೈಜೋಡಿಸಿದ್ದವು ಎಂದು ಅವರು ಹೇಳಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಸಂದರ್ಭದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, "ಯುವಕರು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಮಕ್ಕಳನ್ನು ಬಳಸಿಕೊಂಡು ರಾಜಕೀಯ ಮಾಡುವ ತಂಡ ದೇಶದಲ್ಲಿದೆ. ಅವರಿಗೆ ಮಕ್ಕಳು ರಾಜಕೀಯದ ಆಹಾರವಾಗಬಾರದು ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ ಎಂದು ರಾಘವೇಂದ್ರ ತಿಳಿಸಿದರು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೇ ತಿಂಗಳಲ್ಲೇ ಸೋರಿಕೆಯಾಗಿತ್ತು. ಅದರ ಬಳಿಕ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಈ ರೀತಿಯ ಘಟನೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು ಎಂಬುದು ದೇಶದ ಯುವಕರ ನಿರೀಕ್ಷೆಯಾಗಿದೆ ಎಂದು ಹೇಳಿದರು.
ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಬಂಧಿತ ನಾಯಕರು ಯುವಕರಿಗೆ ಅಗತ್ಯ ಭರವಸೆ ನೀಡಿದ್ದಾರೆ. ಪರೀಕ್ಷೆಗಳ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಹಲವು ವರ್ಷಗಳಿಂದ ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕಿದೆ. ಆ ದಿಸೆಯಲ್ಲಿ ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಜವಾಬ್ದಾರಿ: ಕರ್ನಾಟಕಕ್ಕೆ ಗೌರವ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದನ್ನು ಸ್ವಾಗತಿಸಿದ ರಾಘವೇಂದ್ರ, "ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ್ ಜೋಶಿ ಅವರು ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈಗ ಅವರಿಗೆ ಹೆಚ್ಚುವರಿ ಸಚಿವಾಲಯದ ಹೊಣೆ ನೀಡಿರುವುದು ಕರ್ನಾಟಕಕ್ಕೆ ಸಂದ ಗೌರವವಾಗಿದೆ" ಎಂದು ಹೇಳಿದರು.
ಕಾಂಗ್ರೆಸ್ ಸಂಭ್ರಮಾಚರಣೆ ಕುರಿತು ಟೀಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ವ್ಯಂಗ್ಯವಾಗಿ, "ಪಾಪ... ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿತು ಅಂತ ಮೈಸೂರು ಪಾಕ್, ಜಿಲೇಬಿ ತಿನ್ನುವ ಜನರನ್ನ ನಾವು ನೋಡಿದ್ದೇವೆ" ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಟಾಕಿ ಹೊಡೆಯಬಹುದು, ಘೋಷಣೆಗಳನ್ನು ಕೂಗಬಹುದು. ಆದರೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಅವರ ಉದ್ದೇಶ ಯುವಕರಿಗೆ ನ್ಯಾಯ ಹಾಗೂ ಮನ್ನಣೆ ನೀಡುವುದೇ ಆಗಿದ್ದು, ಅದೇ ನಿಟ್ಟಿನಲ್ಲಿ ಸರ್ಕಾರ ಮುಂದಿನ ಹೆಜ್ಜೆಗಳನ್ನು ಇಡಲಿದೆ ಎಂದು ಹೇಳಿದರು.
136ನೇ 'ಮನ್ ಕಿ ಬಾತ್' ಕುರಿತು ಸಂತಸ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ 136ನೇ 'ಮನ್ ಕಿ ಬಾತ್' ಕಾರ್ಯಕ್ರಮದ ಕುರಿತು ಮಾತನಾಡಿದ ರಾಘವೇಂದ್ರ, ಇಂದು ದೇಶಾದ್ಯಂತ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಶಿವಮೊಗ್ಗದಲ್ಲಿಯೂ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಇದು ಜಿಲ್ಲೆಯ ಹೆಮ್ಮೆಯ ವಿಷಯ ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಸಂವಾದವನ್ನು ಕೂಡ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಅವರು ಪ್ರತೀ ತಿಂಗಳು ಅಂತರಿಕ್ಷ, ಕೃಷಿ, ಕಲೆ, ಸಾಹಿತ್ಯ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಸಾಧನೆಗಳು ಮತ್ತು ಬದಲಾವಣೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.
ಯುದ್ಧ, ಕೋವಿಡ್‌ನಂತಹ ಅತ್ಯಂತ ಸಂಕಷ್ಟದ ಸಂದರ್ಭಗಳಲ್ಲಿಯೂ 'ಮನ್ ಕಿ ಬಾತ್' ಕಾರ್ಯಕ್ರಮ ನಿಲ್ಲಲಿಲ್ಲ. ಇದು ವಿಶ್ವದಲ್ಲೇ ದಾಖಲೆ ನಿರ್ಮಿಸಿರುವ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದು ಹೇಳಿದ ಅವರು, ಶಿವಮೊಗ್ಗ ಜಿಲ್ಲೆಯ ಜನರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಎಂದು ತಿಳಿಸಿದರು.

